ಗೋರಕ್ಷಕರು ಕಾನೂನಿಗಿಂತ ಮಿಗಿಲಲ್ಲ: ರಾಮದಾಸ್ ಅಠವಳೆ

Update: 2017-05-23 18:02 GMT

ಔರಂಗಾಬಾದ್, ಮೇ 23: ಗೋರಕ್ಷಕರು ಕಾನೂನಿಗಿಂತ ಮಿಗಿಲಲ್ಲ. ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತರೆ ಆ ಬಗ್ಗೆ ಪೊಲೀಸರಿಗೆ ತಿಳಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.

ಯಾರು ಕೂಡಾ ಕಾನೂನಿಗಿಂತ ಮಿಗಿಲಲ್ಲ. ಆದ್ದರಿಂದ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ತಿಳಿದು ಬಂದರೆ ಪೊಲೀಸರಿಗೆ ದೂರು ನೀಡಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಆಸ್ಪದವಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಉಪಸಚಿವ ಅಠವಳೆ ಮಾಧ್ಯಮದವರಿಗೆ ತಿಳಿಸಿದರು.

 ತಮ್ಮ ಜೀವನೋಪಾಯಕ್ಕಾಗಿ ಸತ್ತ ಹಸುಗಳ ಚರ್ಮ ಸುಲಿಯುವ ವೃತ್ತಿ ನಿರ್ವಹಿಸುವವರನ್ನು ಕನಿಕರವಿಲ್ಲದೆ ಥಳಿಸುವುದು ದುರದೃಷ್ಟಕರ ಘಟನೆ ಎಂದವರು ತಿಳಿಸಿದರು. ತನ್ನ ತವರೂರು ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, ದೇವೇಂದ್ರ ಫಡ್ನವೀಸ್ ನೇತೃತ್ವದ ಸಮ್ಮಿಶ್ರ ಸರಕಾರ ತನ್ನ ಅವಧಿ ಪೂರೈಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬಿಜೆಪಿಗೆ 15 ಶಾಸಕರ ಕೊರತೆಯಿದೆ. ಒಂದು ವೇಳೆ ಸರಕಾರದ ಸಹಪಕ್ಷ ಶಿವಸೇನೆ ಬೆಂಬಲ ಹಿಂಪಡೆದರೆ ಮಧ್ಯಾವಧಿ ಚುನಾವಣೆಗೆ ಮುಂದಾಗದಂತೆ ಮುಖ್ಯಮಂತ್ರಿ ಫಡ್ನವೀಸ್‌ಗೆ ಮನವಿ ಮಾಡಿಕೊಳ್ಳುತ್ತೇನೆ. ಶಿವಸೇನೆ ಬೆಂಬಲ ಹಿಂಪಡೆಯದು ಎಂಬ ವಿಶ್ವಾಸವಿದೆ ಎಂದವರು ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳು ರೈತರ ಹಿತಚಿಂತನೆಗೆ ಬದ್ಧವಾಗಿದೆ ಎಂದರು. ಅಠವಳೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ನಾಯಕರಾಗಿದ್ದು , ಈ ಪಕ್ಷ ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News