ಬೀದಿಬದಿ ವ್ಯಾಪಾರಸ್ಥರಿಗೆ ವಿಶೇಷ ನಿಯಮಾವಳಿ ರಚನೆಗೆ ಸಿಐಟಿಯು ಒತ್ತಾಯ

Update: 2017-05-23 18:10 GMT

ಮಂಗಳೂರು, ಮೇ 23: ಯುಪಿಎ ಸರಕಾರದ ಅವಧಿಯಲ್ಲಿ ಎಡಪಕ್ಷಗಳ ಪ್ರಬಲ ಒತ್ತಡದ ಮೇರೆಗೆ ದೇಶದಲ್ಲಿ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣಾ ಮಸೂದೆ ಜಾರಿಗೊಂಡರೂ ಅದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರಗಳು ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಮಂತ್ರ ವನ್ನು ಜಪಿಸುತ್ತಿದ್ದರೂ ಈ ವಿಷಯದಲ್ಲಿ ನಿರ್ಲಕ್ಷ ತಾಳಿದೆ. ಹಲವಾರು ಭಾಗ್ಯಗಳ ನೆಪದಲ್ಲಿ ಜನತೆಗಳಿಗೆ ವಂಚಿಸುತ್ತಿದ್ದರೂ ಬೀದಿಬದಿ ವ್ಯಾಪಾರಸ್ಥರಿಗೆ ಮಾತ್ರ 4 ವರ್ಷಗಳ ಅವಧಿಯಲ್ಲಿ ವಿಶೇಷ ನಿಯಮಾ ವಳಿಯನ್ನು ರೂಪಿಸದೆ ಅನ್ಯಾಯ ಎಸಗಿದೆ ಎಂದು ರಾಜ್ಯ ಬೀದಿಬದಿ ವ್ಯಾಪಾರಸ್ಥರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಅಹ್ಮದ್ ಆರೋಪಿಸಿದರು.

ನಗರದ ಎನ್‌ಜಿಒ ಹಾಲ್‌ನಲ್ಲಿ ಮಂಗಳವಾರ ಜರಗಿದ ಸಿಐಟಿಯು ಸಂಯೋಜಿತ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ 6ನೆ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಸ್ಮಾರ್ಟ್‌ಸಿಟಿಯ ಹೆಸರಿ ನಲ್ಲಿ ಬಡವರ ಮೇಲಿನ ದಾಳಿಗಳು ತೀವ್ರಗೊಳ್ಳುತ್ತಿದೆ. ಸ್ಮಾರ್ಟ್ ಸಿಟಿಯಲ್ಲಿ ಬಡವರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಅವಕಾಶವಿಲ್ಲ. ಸ್ಮಾರ್ಟ್ ಸಿಟಿ ಎಂಬುದು ಬಡವರ ಸಮಾಧಿಯ ಮೇಲೆ ರಚನೆಯಾಗಲಿದೆ. ಮಸೂದೆ ಯಲ್ಲಿ ನಿಯಂತ್ರಣ ಹಾಗೂ ರಕ್ಷಣೆ ಎಂಬುದಿದ್ದರೂ, ಇಲ್ಲಿ ನಿಯಂತ್ರಣಕ್ಕೆ ಜಾಸ್ತಿ ಒತ್ತು ನೀಡಲಾಗುತ್ತಿದ್ದು, ರಕ್ಷಣೆಯೆ ಇಲ್ಲವಾಗಿದೆ ಎಂದು ಅವರು ಆಪಾ ದಿಸಿದರು.

ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಗೌರವಾ ಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ಮೂಲಕ ಪರೋಕ್ಷವಾಗಿ ಸರಕಾರಗಳಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಉಭಯ ಸರಕಾರಗಳು ಮಾತ್ರ ಬೀದಿ ವ್ಯಾಪಾರಸ್ಥರ ಮೇಲೆ ಕೆಂಗಣ್ಣು ಬೀರಿ ಅವರನ್ನು ಎತ್ತಂಗಡಿ ನಡೆಸಲು ಹೊಂಚು ಹಾಕುತ್ತಿವೆ ಎಂದು ಅವರು ದೂರಿದರು.

ಪ್ರಥಮ ಹಂತದಲ್ಲಿ ನೀಡಿದ ಗುರುತು ಚೀಟಿಯ ನವೀಕರಣವಾಗಿಲ್ಲ. ಎರಡನೆ ಹಂತದ ಗುರುತು ಚೀಟಿ ಇನ್ನೂ ನೀಡಿಲ್ಲ. ಕಾನೂನು ಬದ್ಧವಾಗಿ ಮಾಡಬೇಕಾದ ಕೆಲಸವನ್ನು ಮಾಡದ ನಗರ ಪಾಲಿಕೆ ನಿಜಕ್ಕೂ ಕಾನೂನು ಉಲ್ಲಂಘನೆ ಮಾಡಿದೆ ಎಂದು ಅವರು ಹೇಳಿದರು.
ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸಮಾರೋಪ ಭಾಷಣ ಮಾಡಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್. ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಅತಾವುಲ್ಲಾ, ಅಣ್ಣಯ್ಯ, ಹಿತೇಶ್ ಪೂಜಾರಿ, ಹಸನ್, ಅಬ್ದುಲ್ ಖಾದರ್, ಮುತ್ತುರಾಜು, ಶಿವಪ್ಪ, ಆದಂ ಬಜಾಲ್, ಆಸಿಫ್, ಹರೀಶ್, ಶ್ರೀಧರ್, ಹೆಲೆನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News