60 ಕೋಟಿ ರೂ. ವೆಚ್ಚದ ಸಮಗ್ರ ಒಳಚರಂಡಿ ಕಾಮಗಾರಿ ಯೋಜನೆ ಅನುಷ್ಠಾನಕ್ಕೆ ಚಿಂತನೆ: ರೆ

Update: 2017-05-23 18:21 GMT

ಬಂಟ್ವಾಳ, ಮೇ 23: ಜನಗಣತಿಯ ಆಧಾರದಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಬಜೆಟ್‌ನಲ್ಲಿ ಹಂಚಿಕೆ ಮಾಡಿ ಮೀಸಲಿಟ್ಟಿರುವ ಅನುದಾನವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಬಂಟ್ವಾಳ ಪುರಸಭಾ ವಠಾರದಲ್ಲಿ ವಿವಿಧ ಸವಲತ್ತುಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಸಚಿವರು, ನಗರೋತ್ತಾನ ಯೋಜನೆಯಡಿ ಪುರಸಭೆಗಳಿಗೆ 9 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂ.ನಂತೆ ಒಟ್ಟು ಎರಡು ಕೋಟಿ ರೂ. ವಿಶೇಷ ಅನುದಾನವನ್ನು ಬಂಟ್ವಾಳ ಪುರಸಭೆಗೂ ಮಂಜೂರಾತಿ ನೀಡಿದೆ ಎಂದರು. ಬಂಟ್ವಾಳ ಪುರಸಭಾ ವ್ಯಾಪ್ತಿಯ 60 ಕೋಟಿ ರೂ. ವೆಚ್ಚದ ಸಮಗ್ರ ಒಳ ಚರಂಡಿ ಯೋಜನೆಯ ಮುಂದುವರಿದ ಕಾಮಗಾರಿಯ ಅನುಷ್ಠಾನಕ್ಕೆ ಗಂಭೀರ ಚಿಂತನೆ ನಡೆಸಲಾಗಿದ್ದು ಈ ನಿಟ್ಟಿನಲ್ಲಿ ಸರಕಾರದ ಜೊತೆ ನಿರಂತರ ಚರ್ಚೆ ನಡೆಸಲಾಗುತ್ತಿದೆ. ಪುರಸಭೆಯನ್ನು ನಗರಸಭೆಯನ್ನಾಗಿಸಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು.

ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ, ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪಲ್ಲಮಜಲು, ಪಾಣೆಮಂಗಳೂರು ಹಾಗೂ ಬಿ.ಕಸ್ಬಾ ವ್ಯಾಪ್ತಿಯಲ್ಲಿ ಜಮೀನು ಗುರುತಿಸಲಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 500ಕ್ಕೂ ಮಿಕ್ಕಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ಉದ್ದೇಶಿಸಲಾಗುವುದು ಎಂದರು.

ಇದೇ ವೇಳೆ ಹತ್ತನೆ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 350 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೇಕಡ 7.25 ಯೋಜನೆಯಡಿ 48 ಶೌಚಾಲಯ ನಿರ್ಮಾಣಕ್ಕೆ ತಲಾ 10 ಸಾವಿರ ರೂ. ಸಹಾಯ ಧನ, ತುರ್ತು ಚಿಕಿತ್ಸೆಗಾಗಿ ಸಹಾಯ ಧನವಾಗಿ 5 ಲಕ್ಷ ರೂ., ಶೇಕಡ 3ರಡಿ ವಿಕಲ ಚೇತನರಿಗೆ 5.69 ರೂ. ಚೆಕ್ ವಿತರಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ್ ರೈ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ಮುಖ್ಯಾಧಿಕಾರಿ ಸುಧಾಕರ್ ವಂದಿಸಿದರು. ಶಹರಿ ಯೋಜನಾಧಿಕಾರಿ ಮತ್ತಡಿ ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 56 ಕೋಟಿ ರೂ. ವೆಚ್ಚದ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ. ಈ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಬಂಟ್ವಾಳ ಬೈಪಾಸ್ ಬಳಿ ತಕರಾರು ಇರುವುದರಿಂದ ಶೀಘ್ರವೇ ಸಮಸ್ಯೆಯನ್ನು ಪರಿಹರಿಸಲಾಗುವುದು.

- ಬಿ.ರಮಾನಾಥ ರೈ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News