ಸಂಘಟನೆಗಳು ಸೌಹಾರ್ದಕ್ಕಾಗಿಯೇ ಹೊರತು ಸಂಘರ್ಷಕ್ಕಲ್ಲ: ಭಂಡಾರಿ

Update: 2017-05-23 18:23 GMT

ಉಡುಪಿ, ಮೇ 23: ಸಂಘಟನೆಗಳು ಸಮಾಜದಲ್ಲಿ ಸೌಹಾರ್ದ ಹಾಗೂ ಸಮೃದ್ಧಿಗಾಗಿ ಇರಬೇಕೆ ಹೊರತು ಸಂಘರ್ಷಕ್ಕಲ್ಲ. ಈ ಮೂಲಕ ಸಂಘಟನೆಗಳು ಸಮಾಜದ ಆಸ್ತಿ ಆಗಬೇಕು ಎಂದು ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದ್ದಾರೆ.

ಅಂಬಲಪಾಡಿಯಲ್ಲಿರುವ ಜಿಲ್ಲಾ ಸವಿತಾ ಸಮುದಾಯ ಭವನದಲ್ಲಿ ಮಂಗಳವಾರ ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ದಶಕದ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿರುವ ಎಲ್ಲ ಭಾಷೆ, ಧರ್ಮ, ಜಾತಿಯ ಜನ ಈ ದೇಶದ ದೊಡ್ಡ ಮಾನವ ಸಂಪತ್ತು. ಹೀಗಾಗಿ ಸಣ್ಣ ಮತ್ತು ಆರ್ಥಿಕ ಹಿಂದುಳಿದ ಸಹಿತ ಎಲ್ಲ ಸಮಾಜದವರು ಈ ದೇಶದ ಪ್ರಗತಿಯಲ್ಲಿ ಅನಿವಾರ್ಯ. ಜಾತಿಯ ಸೃಷ್ಠಿ ಎಂಬುದು ದೇವರದ್ದಲ್ಲ, ಮನುಷ್ಯರದ್ದು. ಅದನ್ನು ಮೆಟ್ಟಿನಿಂತು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನವನ್ನು ಎಲ್ಲ ಜಾತಿಯವರು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಣಿಪಾಲ ವಹಿಸಿದ್ದರು. ಸವಿತಾ ಆರೋಗ್ಯ ಶ್ರೀ ವಿಮಾ ಯೋಜನೆಯನ್ನು ನಟ ಸೌರಭ್ ಭಂಡಾರಿ ಹಾಗೂ ಸವಿತಾ ಹಿರಿಯ ನಾಗರಿಕ ವೇತನವನ್ನು ಜಯಂಟ್ಸ್ ಫೆಡರೇಶನ್ 6ರ ಅಧ್ಯಕ್ಷ ಮಧುಸೂದನ್ ಬಿಡುಗಡೆ ಮಾಡಿದರು.

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಅರುಣ್ ಭಂಡಾರಿ, ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಶಂಕರ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕಟಪಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಉಪಸ್ಥಿತರಿದ್ದರು.

ನಿರ್ದೇಶಕ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿದರು. ಪಡುಕೆರೆ ಮಂಜುನಾಥ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News