ನನ್ನ ಅತ್ಯಂತ ಆಪ್ತರು ಕೊಟ್ಟಷ್ಟು ನೋವನ್ನು ಈ ಕಾಯಿಲೆ ನನಗೆ ಕೊಡಲಿಲ್ಲ : ಮುಸಮ್ಮದ್ ಬೇಗಂ
ನನ್ನ ಕೈಗಳಿಗೆ ಮೆಹಂದಿ ಹಚ್ಚಲು ಬಹಳಷ್ಟು ಸಮಯ ತೆಗೆದುಕೊಂಡಿತು. ಆದರೆ ನನ್ನ ಪತಿಗೆ ಅದು ಇಷ್ಟವಾಗುವುದೇ ಇಲ್ಲ. ‘‘ಅದನ್ನು ಅಡಗಿಸು ! ಅದು ಕಾಣುತ್ತಿದೆ’’ ಎಂದು ಯಾವತ್ತೂ ಹೇಳುತ್ತಿರುತ್ತಾರೆ. ನನಗೆ ನನ್ನ ರೋಗ, ನನ್ನ ಕೈ ಕಾಲುಗಳಲ್ಲಿರುವ ಬಿಳಿ ಕಲೆಗಳನ್ನು ಮುಚ್ಚಬೇಕಿತ್ತು.
ಜನರ ದ್ವೇಷದ ಭಾವನೆಯಿಂದ ನನ್ನನ್ನು ತಪ್ಪಿಸಿಕೊಳ್ಳುವುದರಲ್ಲಿಯೇ ನಾನು ನನ್ನ ಜೀವನ ಕಳೆದು ಬಿಟ್ಟೆ. ನನ್ನ ಪ್ರೀತಿಪಾತ್ರರ ನಿರ್ಲಕ್ಷ್ಯದಿಂದ ನನ್ನ ಹೃದಯವನ್ನು ಕಾಪಾಡಲು ನಾನು ಯತ್ನಿಸುತ್ತೇನೆ. ಪ್ರತಿ ಬಾರಿ ನಾನು ಗ್ರಾಮದಲ್ಲಿರುವ ಯಾವುದಾದರೂ ಸಮಾರಂಭದಲ್ಲಿ ಭಾಗಿಯಾಗದಾಗಲೂ ಜನರು ನನ್ನತ್ತ ಬೊಟ್ಟು ಮಾಡಿ ‘‘ಗುಣವಾಗದ ಕಾಯಿಲೆ’’ ಎಂದು ಹೀಗಳೆಯುತ್ತಿದ್ದರು.
ನಾನೆಷ್ಟು ನೊಂದಿದ್ದೇನೆ ಎಂದು ತಿಳಿಯುವ ಮನಸ್ಸು ಯಾರಿಗೂ ಇರಲಿಲ್ಲ. ಎಲ್ಲರೂ ಅವರಿಗೆ ತಿಳಿಯದೇ ಇದ್ದ ನನ್ನ ಕಷ್ಟದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿಯೇ ವ್ಯಸ್ತರಾಗುತ್ತಿದ್ದರು. ಸುಮಾರು 35 ವರ್ಷಗಳ ಹಿಂದೆ ನಾನು ನನ್ನ ಚರ್ಮದಲ್ಲಿ ಮೊದಲ ಬಾರಿ ಬಿಳಿ ಕಲೆಗಳನ್ನು ನೋಡಿದೆ. ನನ್ನ ಪತಿ ನೆಲದಲ್ಲಿ ಪ್ರತ್ಯೇಕವಾಗಿ ಮಲಗಲಾರಂಭಿಸಿದಾಗಲೇ ನಾನು ನನ್ನ ಬಗ್ಗೆ ಗಮನ ಹರಿಸಲು ಆರಂಭಿಸಿದೆ.
ನಾವು ಪ್ರತ್ಯೇಕವಾಗಿ ಮಲಗಿ 30 ವರ್ಷಗಳಾಗಿವೆ. ಯಾವಾಗಲೂ ನನ್ನ ಕೈಗೆ ಮೆಹಂದಿ ಬಳಿಯಲು ನನಗೆ ಹೇಗೆ ಕಷ್ಟವಾಗುತ್ತಿತ್ತೋ ಹಾಗೆಯೇ ಸಣ್ಣ ಹಾಸಿಗೆಯಲ್ಲಿ ಮಲಗಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದರು.
ನನ್ನ ಏಕೈಕ ಪುತ್ರಿಯ ವಿವಾಹದಲ್ಲೂ ಭಾಗವಹಿಸಲು ನನಗೆ ಅನುಮತಿಯಿರಲಿಲ್ಲ. ಆಕೆಯ ಮದುವೆಯ ದಿನ ಆಕೆಯೊಡನೆ ಮಾತನಾಡಲು ನಾನು ಕಾದಿದ್ದೆ. ಆಕೆಯ ಜೀವನದ ಅತ್ಯಂತ ಮಹತ್ವದ ದಿನದಂದು ಆಕೆ ನನ್ನನ್ನು ನಿರಾಸೆಗೊಳಿಸಲಾರಳು ಎಂದು ನನಗೆ ತಿಳಿದಿತ್ತು. ನಾನು ಕನ್ನಡಿಯನ್ನು ನೋಡುತ್ತಲೇ ಇರುತ್ತಿದ್ದೆ ಹಾಗೂ ನನ್ನ ಕಣ್ಣುಗಳ ಕೆಳಗೆ ಮೂಡಿದ್ದ ಹೊಸ ಬಿಳಿ ಕಲೆಗಳನ್ನು ಗಮನಿಸಿದ್ದೆ.
ನಾನು ಯಾವ ಸೀರೆ ಉಡಬೇಕೆಂದು ಆಕೆಯಲ್ಲಿ ಕೇಳಿದಾಗ ಆಕೆ ನನಗೆ ಎಲ್ಲವೂ ಚಂದ ಕಾಣುವುದೆಂದು ಹೇಳಿ ನಾನು ಮನೆಯಲ್ಲಿರಬೇಕು ಎಂಬುದನ್ನೂ ಸೇರಿಸಿದಳು. ನನ್ನಿಂದ ಆಕೆಯ ಮದುವೆ ಮುರಿದು ಬಿದ್ದರೆ ಆಕೆಗಿಂತ ನಾನು ಹೆಚ್ಚು ನೊಂದುಕೊಳ್ಳುತ್ತೇನೆಂದು ಹೇಳಿದಳು. ನನ್ನ ಮಗಳಿಗೆ ಆಗ 18 ವರ್ಷ ವಯಸ್ಸು.
ಆಕೆಯ ಎದುರು ಕೈಯ್ಯಲ್ಲಿ ಸೀರೆ ಹಿಡಿದುಕೊಂಡು ಕನ್ನಡಿಯೆದುರು ನಿಂತ ಮಗುವಿನಂತೆ ನನಗನಿಸಿತ್ತು. ಅದರ ನಂತರ ನಾನು ಕನ್ನಡಿ ನೋಡಲೇ ಇಲ್ಲ. ನನ್ನ ಮುಖ ಅಥವಾ ದೇಹದಲ್ಲಿ ಅದೆಷ್ಟು ಬಿಳಿ ಕಲೆಗಳಾಗಿವೆ ಎಂಬ ಬಗ್ಗೆ ಚಿಂತೆ ಮಾಡುವುದನ್ನೇ ಬಿಟ್ಟು ಬಿಟ್ಟೆ. ಈ ಕಾಯಿಲೆ ನನ್ನ ಮನಸ್ಸಿನಾಳಕ್ಕೆ ಹೋಗಿ ನನ್ನ ಆತ್ಮವನ್ನೇ ಘಾಸಿಗೊಳಿಸಿದ್ದರಿಂದ ನಾನು ನೋವನ್ನನುಭವಿಸುತ್ತಿದ್ದೆ.
ಜನರು, ಮುಖ್ಯವಾಗಿ ನನ್ನ ಆಪ್ತರು ನೀಡಿದಷ್ಟು ನೋವು ಈ ಕಾಯಿಲೆ ನನಗೆ ನೀಡಲಿಲ್ಲ. ಒಂದು ದಿನ ನನ್ನೊಡನೆ ಮಾತನಾಡುತ್ತಿದ್ದ ಮಹಿಳೆಯೊಬ್ಬಳು ಸಂಭಾಷಣೆಯನ್ನು ಅರ್ಧದಲ್ಲಿಯೇ ತುಂಡರಿಸಿ ಇಂತಹ ಒಂದು ಕಾಯಿಲೆಯಿಂದ ನರಳಲು ನಾನು ಶಾಪ ಪಡೆದಿದ್ದಿರಬೇಕೆಂದು ಹೇಳಿದಳು. ನನ್ನಂಥವಳೊಬ್ಬಳಿಗೆ ಇಂತಹ ಕಾಯಿಲೆ ಬಂದಿದ್ದನ್ನು ಆಕೆಗೆ ಒಪ್ಪಿಕೊಳ್ಳಲು ಕಷ್ಟವಾಗಿತ್ತು.
ಆಕೆಯನ್ನು ತಿದ್ದಿ ನಾನು ಈ ರೀತಿ ಹೇಳಿದೆ -‘‘ಸಾಯುವ ಮುನ್ನ ಜನರ ನಿಜವಾದ ಮುಖಗಳನ್ನು ನೋಡಲು ಸಾಧ್ಯವಾಗಿರುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ. ಈ ಜಗತ್ತಿನಲ್ಲಿ ಜನರು ಕೇವಲ ಚರ್ಮಕ್ಕಲ್ಲದೆ ಹೃದಯಕ್ಕೆ ಬೆಲೆ ನೀಡುವುದಿಲ್ಲವೆಂದು ನಾನು ಕಲಿತೆ.’’
- ಮುಸಮ್ಮದ್ ಬೇಗಂ (65)