ವಿಶ್ವ ಎಂಡಿಆರ್‌ಟಿ ಮಹಾಸಭೆಯ ಸಭಾಪತಿಯಾಗಿ ಡಾ ಆರ್.ಕೆ.ಶೆಟ್ಟಿ ಆಯ್ಕೆ
ಮುಂಬೈ, ಮೇ.24: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿನ ಸಮಾಜ ಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ, ಡಾ ಆರ್.ಕೆ. ಶೆಟ್ಟಿ ಅಮೇರಿಕಾದ ಫ್ಲೋರಿಡಾ ಅಲ್ಲಿನ ಓರ್‌ಲ್ಯಾಂಡೋದಲ್ಲಿ ನಡೆಯಲಿರುವ ಜಾಗತಿಕ ಮಿಲಿಯನ್ ಡಾಲರ್ ರೌಡ್ ಟೇಬಲ್ (ಎಂಡಿಆರ್ಟಿ) ಆರ್ಥಿಕ ತಜ್ಞರ ಮಹಾಸಭೆಯ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಜೂ. 7 ರಂದು ನಡೆಯಲಿರುವ ಸಮಾವೇಶದಲ್ಲಿ ವಿಶೇಷ ಬಾಷಣಕಾರರಾಗಿ ಪಾಲ್ಗೊಂಡು `ಆರ್ಥಿಕ ವ್ಯವಹಾರದಲ್ಲಿ ಹೇಗೆ ತುದಿಗೇರುವುದು ಮತ್ತು ಅಲ್ಲೇ ಹೇಗೆ ವಾಸ್ತವ್ಯವಾಗುವುದು' (How to Reach Top of the Table and Stay there) ವಿಷಯದಲ್ಲಿ ಸಮಾವೇಶವನ್ನುದ್ದೇಶಿಸಿ ಡಾ. ಶೆಟ್ಟಿ ಮಾತನಾಡಲಿದ್ದಾರೆ.
ಎಲ್ಲೈಸಿ ಆಫ್ ಇಂಡಿಯಾದ ಪ್ರತಿಷ್ಠಿತ ಕಾರ್ಪೋರೇಟ್ ಕ್ಲಬ್‌ನ ಸದಸ್ಯತನ ಪಡೆದ ಡಾ. ಶೆಟ್ಟಿ ಅಮೇರಿಕಾದ ಕಾಲೇಜ್‌ನಿಂದ ಎಲ್‌ಯುಟಿಸಿಎಫ್‌ನ ಪದವಿಧರರಾಗಿ ಸುಮಾರು ಇಪ್ಪತ್ತು ವರುಷಗಳಿಂದ ಎಂಡಿಆರ್ಟಿ ಸದಸ್ಯತ್ವ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಿಕ ತಜ್ಞ, ತುಳು ಕನ್ನಡಿಗ ಡಾ ಆರ್.ಕೆ.ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಕರ್ನಾಟಕದ ಚಿಕ್ಕಮಂಗಳೂರಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು ಅಪ್ಪಿ ಕೆ.ಶೆಟ್ಟಿ ದಂಪತಿ ಪುತ್ರ.
ಡಾ ಆರ್.ಕೆ ಶೆಟ್ಟಿ ಅರ್ಥಶಾಸ್ತ್ರದಲ್ಲಿನ ವಾಣಿಜ್ಯ ಪದವಿ ಗಳಿಸಿ ಹಣಕಾಸು ನಿರ್ವಹಣೆಯಲ್ಲಿ ಡಿಪ್ಲೊಮಾ, ಅಮೇರಿಕಾದ ವಿಮಾ ಕಾಲೇಜಿನಿಂದ ಪದವಿಧರರಾಗಿರುವರು.
ಪ್ರಪಂಚದ ಅತೀ ಶ್ರೇಷ್ಠರಲ್ಲಿ ಅಗ್ರಗಣ್ಯ ವಿತ್ತೀಯ ಸಲಹೆಗಾರ ಪರಮೋಚ್ಛ ಸಂಘಟನೆಯಾದ ಕೋರ್ಟ್ ಆಫ್ ಟೇಬಲ್‌ನ ಹಲವಾರು ಸಾಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂಡಿಆರ್‌ಟಿಯ ವಿಭಾಗೀಯ ಉಪಾಧ್ಯಕ್ಷ (ಡಿವಿಪಿ)ರಾಗಿ ಸೇವೆ ಸಲ್ಲಿಸಲಿರುವ ಭಾರತದ ಪ್ರಥಮ ಎಂಡಿಆರ್‌ಟಿ ಸದಸ್ಯರಾಗಿರುವ ಇವರು ಪ್ರಪಂಚದ ಅತ್ಯುನ್ನತ ಗೌರವದ ಟಾಪ್ ಆಫ್ ದಿ ಟೇಬಲ್ ಪ್ರಶಸ್ತಿಯನ್ನೂ ಮುಡಿಗೇರಿಸಿ ಕೊಂಡ ತುಳುಕನ್ನಡಿಗ.
ಸಮಾಜ ಸೇವೆಯ ಮುಂಚೂನಿಯಲ್ಲಿ ಡಾ ಆರ್‌ಕೆಎಸ್:
ಆರ್.ಕೆ ಶೆಟ್ಟಿ ತಮ್ಮ ಹುಟ್ಟೂರು ಚಿಕ್ಕಮಂಗಳೂರುನ ಕಂಬಿಹಳ್ಳಿಯಲ್ಲಿ ಶಾಲೆ ಒಂದನ್ನು ನಿರ್ಮಿಸಿ ಶಿಕ್ಷಣ ಪ್ರೇಮಿಯಾಗಿ ಶ್ರಮಿಸುತ್ತಿದ್ದಾರೆ. ಮುಂಬೈ ಯಲ್ಲಿ ಏಷ್ಯಾದ ಅತೀ ದೊಡ್ಡ ಕೊಳಚೆಗೇರಿ ಧಾರಾವಿಯ ಮುನ್ಸಿಪಾಲ್ ಶಾಲೆ, ಆರ್ಥಿಕ ಸಂಕಷ್ಟದಲ್ಲಿರುವ ನುರಾರು ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಪುಸ್ತಕ, ಶೈಕ್ಷಣಿಕ ಸಾಮಾಗ್ರಿ ಹಾಗೂ ಸಮವಸ್ತ್ರ ವಿತರಣೆ ಮಾಡಿ ಶೈಕ್ಷಣಿಕವಾಗಿ ಅಪಾರ ಸೇವೆ ಗೈಯುತ್ತಿದ್ದಾರೆ.
ಬಂಟರ ಸಂಘದ ಉನ್ನತ ಶಿಕ್ಷಣ ಕಟ್ಟಡ ನಿರ್ಮಾಣ ನಿಧಿ ಮತ್ತು ಸಮಾಜ ಕಲ್ಯಾಣ ಯೋಜನೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿರುವರು. ಮುಂಬೈಯ ಜುಹೂ ಜಾಯಂಟ್ಸ್ ಕ್ಲಬ್‌ನ ಸಹಭಾಗಿತ್ವದಲ್ಲಿ ಅಖಿಲ ಭಾರತೀಯ ಸಂಸ್ಥೆಯ ವಿಕಲಾಂಗರಿಗೆ, ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಇವರ ಪ್ರಧಾನ ಸೇವೆಯಾಗಿದೆ.
ಟಾಪ್ ಆಫ್ ದ ಟೇಬಲ್'ಗೆ ಸ್ಪೀಕರ್ ಆಗಿ ಆಯ್ಕೆಯಾದ ಮುಂಬೈಯ ಚಿರಪರಿಚಿತ ಆರ್ಥಿಕ ತಜ್ಞ ಮತ್ತು ಪ್ರಮುಖ ಆದಾಯ ತೆರಿಗೆ ವೃತ್ತಿಪರ ಮೇಧಾವಿ ಆರ್.ಕೆ.ಶೆಟ್ಟಿ ಇವರು ಪತ್ನಿ ಅನಿತಾ ಆರ್.ಶೆಟ್ಟಿ ಮತ್ತು ಮಕ್ಕಳಾದ ತರುಣ್ ಆರ್.ಶೆಟ್ಟಿ ಮತ್ತು ಶ್ವೇತಾ ಆರ್.ಶೆಟ್ಟಿ ಇವರೊಂದಿಗೆ ಸಾಂತಕ್ರೂಜ್ ಪೂರ್ವದಲ್ಲಿ ವಾಸವಾಗಿದ್ದಾರೆ.