×
Ad

ಅಂಕ ಆಧಾರಿತ ಶಿಕ್ಷಣದಿಂದ ಮಕ್ಕಳ ಮೇಲೆ ಒತ್ತಡ: ಡಾ.ಚಂದ್ರಶೇಖರ್

Update: 2017-05-24 19:32 IST

ಉಡುಪಿ, ಮೇ 24: ಇಂದಿನ ಅಂಕ ಆಧಾರಿತ ಶಿಕ್ಷಣದಿಂದ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು ಕೂಡ ಆತಂಕಕ್ಕೀಡಾಗಿದ್ದಾರೆ. ಅಂಕವೇ ಮಕ್ಕಳ ಯೋಗ್ಯತೆಯನ್ನು ಅಳೆಯುವ ಮಾನದಂಡವಾಗಿದೆ ಎಂದು ನಾಡಿನ ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದ್ದಾರೆ.

ಉಡುಪಿ ಕುಂಜಿಬೆಟ್ಟು ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಆಶ್ರಯ ದಲ್ಲಿ ಬುಧವಾರ ಕಾಲೇಜು ಸಭಾಂಗಣದಲ್ಲಿ ‘ವಿದ್ಯಾರ್ಥಿ ಸಮಸ್ಯೆಗಳು: ಆಪ್ತಸಲಹೆ ಸಮಾಧಾನ’ ಎಂಬ ವಿಷಯದ ಕುರಿತು ಅರು ವಿಶೇಷ ಉಪ ನ್ಯಾಸ ನೀಡಿದರು.

ಶಿಕ್ಷಣದ ಮುಖ್ಯ ಉದ್ದೇಶ ಜ್ಞಾನಾರ್ಜನೆ. ಮಕ್ಕಳು ಪತ್ರಿಕೆ ಹಾಗೂ ಪುಸ್ತಕ ಓದುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪದವಿ ಶಿಕ್ಷಣ ಪಡೆದರೂ ಸಾಕಷ್ಟು ಯುವಜನತೆಗೆ ಬದುಕುವ ಕಲೆ ಗೊತ್ತಿಲ್ಲ ಎಂದು ಅವರು ತಿಳಿಸಿದರು. ಭಾರತದಲ್ಲಿ ಹದಿಹರೆಯದವರು ಹೆಚ್ಚಾಗಿ ಅಪಘಾತ, ಆತ್ಮಹತ್ಯೆ ಹಾಗೂ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ 1.4 ಲಕ್ಷ ಯುವಜನತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಮೂಲ ಕಾರಣ ನಿರಾಶೆ. ಶೇ.80ರಷ್ಟು ಕಾಯಿಲೆ ಬರುವುದು ಮನಸ್ಸಿನ ಒತ್ತಡದಿಂದ. ಭಾರತದಲ್ಲಿ ಶೇ.60ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದರು.
 

ಮೆದುಳಿನ ಬಲಭಾಗ ಭಾವನೆಗಳನ್ನು ಪ್ರಕಟಣೆ ಮಾಡಿದರೆ, ಎಡ ಭಾಗವು ಭಾಷೆ, ವಿಜ್ಞಾನ ಕಲಿಕೆ, ಆಲೋಚನೆ, ಚಿಂತನೆಯನ್ನು ಮಾಡುತ್ತದೆ. ಶೇ.90 ರಷ್ಟು ವಿದ್ಯಾರ್ಥಿಗಳಿಗೆ ಎರಡಕ್ಕಿಂತ ಹೆಚ್ಚು ಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ. ಆದುದರಿಂದ ಮಕ್ಕಳಿಗೆ ಹೆಚ್ಚು ಹೆಚ್ಚು ಭಾಷೆ ಕಲಿಸುವ ಕೆಲಸ ಮಾಡಬೇಕು. ಮೆದುಳಿಗೆ ಆಗುವ ಹಾನಿಯನ್ನು ಸರಿಪಡಿಸಲು ಆಗಲ್ಲ. ಆದುದರಿಂದ ಆಲ್ಕೋಹಾಲ್‌ನಿಂದ ದೂರ ಇರುವಂತೆ ಮಕ್ಕಳಿಗೆ ಕಿವಿಮಾತು ಹೇಳಬೇಕು ಎಂದು ಅವರು ಹೇಳಿದರು.

ಶೇ.70ರಷ್ಟು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಬುದ್ದಿಮಟ್ಟ(ಐಕ್ಯೂ) ಶೇ.85ರಿಂದ 110 ಇರುತ್ತದೆ. ಐಕ್ಯೂ ಕಡಿಮೆ ಇರುವ ಮಕ್ಕಳನ್ನು ದಡ್ಡ ಅಂತ ಹಿಯಾಳಿಸ ಬಾರದು. ಇದು ಶಿಕ್ಷಕರ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ. ಅಂತಹ ಮಕ್ಕಳನ್ನು ನಿಧಾನವಾಗಿ ಕಲಿಯಲು ಬಿಡಬೇಕು. ಯಾವುದೇ ಕಾರಣಕ್ಕೂ ಒತ್ತಡ ಹಾಕಬಾರದು ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಉಷಾಲಿನಿ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ಡಾ.ಸಿ.ಆರ್.ಚಂದ್ರಶೇಖರ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

‘ನೆನಪಿನ ಶಕ್ತಿ ವೃದ್ಧಿಗೆ ಔಷಧಿ ಇಲ್ಲ’
ನೆನಪು ಎಂಬುದು ಗ್ರಹಿಕೆ, ಮುದ್ರಣ, ಸ್ಮರಣೆ ಎಂಬ ಮೂರು ಹಂತಗಳಲ್ಲಿ ನಡೆಯುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಯಾವುದೇ ಮಾತ್ರೆ, ಟಾನಿಕ್, ಆಹಾರ ಇಲ್ಲ. ಓದಿ, ಬರೆದು, ಮನನ ಮಾಡುವುದರಿಂದ ಮಾತ್ರ ನೆನಪಿನ ಶಕ್ತಿ ಹೆಚ್ಚಿಸ ಬಹುದು. ಮಕ್ಕಳು ಓದಲು ಬೆಳಗ್ಗೆಯೇ ಒಳ್ಳೆಯ ಸಮಯ ಎಂಬುದು ಸರಿಯಲ್ಲ. ಯಾವುದೇ ಸಮಯದಲ್ಲೂ ಓದಿಕೊಳ್ಳಬಹುದು ಎಂದು ಡಾ. ಸಿ. ಆರ್.ಚಂದ್ರಶೇಖರ್ ಹೇಳಿದರು.

 

ಇಂದು ವಿದ್ಯಾರ್ಥಿಗಳು ಪ್ರತಿದಿನ ಮೂರು ಗಂಟೆ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದು ಎಲ್ಲ ಕಡೆ ಇರುವ ಸಮಸ್ಯೆಯಾಗಿದೆ. ಇದರಿಂದಾಗಿ ಮಕ್ಕಳು ದಾರಿ ತಪ್ಪುವಂತಾಗಿದೆ. ಈ ಬಗ್ಗೆ ಪೋಷಕರು ಸಾಕಷ್ಟು ಎಚ್ಚರ ವಹಿಸ ಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News