ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು
ಮಂಗಳೂರು, ಮೇ 24: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆರು ಮೇಳಗಳ ಯಕ್ಷಗಾನ ತಿರುಗಾಟದ ಕೊನೆಯ ಸೇವೆ ಆಟವು ಮೇ 25ರಂದು ಬೆಳಗ್ಗೆ 8 ಗಂಟೆಯಿಂದ ಮರುದಿನ ಬೆಳಗ್ಗೆ 8 ಗಂಟೆಯವರೆಗೆ ಶ್ರೀ ಕಟೀಲು ದೇವಸ್ಥಾನದ ರಥಬೀದಿಯಲ್ಲಿ ಆರು ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಪ್ರಯುಕ್ತ ಕಟೀಲು ಪರಿಸರದಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಮಂಗಳೂರು ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‌ನಿಂದ ಏಕಮುಖವಾಗಿ ಚಲಿಸಿ ಕಾಲೇಜು ಮುಂದುಗಡೆ ಮುಖ್ಯ ರಸ್ತೆಯನ್ನು ಸೇರುವುದು.
ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ದೇವಳ ಪದವಿಪೂರ್ವ ಕಾಲೇಜು ಮೈದಾನದ ಮೂಲಕ ವಿಜಯಾ ಬ್ಯಾಂಕ್ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ ಮಂಗಳೂರು ಕಡೆಗೆ ಹೋಗಬೇಕು ಹಾಗೂ ಇತರ ವಾಹನಗಳಿಗೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‌ಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಬಸ್ಸುಗಳು ಎಂದಿನಂತೆ ಬಸ್ಸು ನಿಲ್ದಾಣಕ್ಕೆ ಬಂದು ಹೋಗುವುದು. ದೇವಳ ಹಿರಿಯ ಪ್ರಾಥಮಿಕ ಶಾಲೆ ಮೈದಾನದಿಂದ ವಿಜಯಾ ಬ್ಯಾಂಕ್‌ವರೆಗಿನ ಮಾರ್ಗದ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಮೇ 25ರಂದು ಬೆಳಗ್ಗೆ 8 ಗಂಟೆಯಿಂದ ಮರುದಿನ ಬೆಳಗ್ಗೆ 8 ಗಂಟೆಯವರೆಗೆ ಶ್ರೀ ದೇವಳದ ರಥಬೀದಿಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಹಾಗೂ ವ್ಯವಸ್ಥಾ ದೃಷ್ಟಿಯಿಂದ ವಾಹನ ಪೂಜೆಗಳು ಇರುವುದಿಲ್ಲ ಎಂದು ಪೊಲೀಸು ಆಯುಕ್ತರ ಪ್ರಕಟನೆ ತಿಳಿಸಿದೆ.