ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ: ದೂರು-ಪ್ರತಿದೂರು
ಮೂಡುಬಿದಿರೆ, ಮೇ 24: ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರೋರ್ವರ ಕುರಿತಾದ ಫೇಸ್‌ಬುಕ್ ಕಮೆಂಟ್ ದಾಖಲಿಸಿದ್ದಕ್ಕಾಗಿ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.
ಮೂಡುಬಿದಿರೆ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಹಾಸ ಸನಿಲ್ ತನ್ನ ಜೊತೆಗಿದ್ದ ಇಬ್ಬರಿಗೆ ಗ್ಲೆನ್ ವಿಶಾಲ್ ತಲೆಗೆ ಹೊಡೆದಿರುವುದಾಗಿ ದೂರು ದಾಖಲಿಸಿದ್ದರೆ, ಬಿಜೆಪಿ ಕಾರ್ಯಕರ್ತ ಗ್ಲೆನ್ ವಿಶಾಲ್ ಪ್ರತಿದೂರು ದಾಖಲಿಸಿದ್ದಾರೆ.
ಚಂದ್ರಹಾಸ ಸನಿಲ್ ಕಟೀಲು ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದಾಗ ವಿಶಾಲ್ ಮನೆಗೆ ತೆರಳಿ ನೀನು ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಯಾಕಾಗಿ ಎಂದು ಪ್ರಶ್ನಿಸಿದ್ದು, ಈ ಸಂದರ್ಭ ವಿಶಾಲ್ ಉಡಾಪೆಯಾಗಿ ವರ್ತಿಸಿ ನನ್ನ ಮತ್ತು ನನ್ನ ಜೊತೆಗಿದ್ದವರ ತಲೆಗೆ ಹೊಡೆದಿದ್ದಾನೆ ಎಂದು ಸನಿಲ್ ಪೊಲೀರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ವಿಶಾಲ್ ಆಸ್ಪತ್ರೆಗೆ ದಾಖಲಾಗಿ ಸನಿಲ್ ಮತ್ತು ಇತರರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಕಡೆಯವರ ದೂರನ್ನು ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಸ್ಥಳ ಮಹಜರು ನೆಡೆಸಿರುವುದಾಗಿ ಠಾಣಾಧಿಕಾರಿ ತಿಳಿಸಿದ್ದಾರೆ.
ವಿಶಾಲ್ ಈ ಹಿಂದೆಯೂ ಇಲ್ಲಿನ ಶಾಸಕರ ಮತ್ತು ಕಾಂಗ್ರೆಸ್ ನಾಯಕರ ಬಗ್ಗೆ ಕೀಳುಮಟ್ಟದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಎಚ್ಚರಿಕೆ ನೀಡಿದರೂ ಕೇಳಿರಲಿಲ್ಲ. ಮುಂದೆ ಕಾನೂನುಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಚಂದ್ರಹಾಸ ಸನಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.