ಮಕ್ಕಳ ಮೇಲೆ ಒತ್ತಡ ಹೇರಬೇಡಿ, ಅವರನ್ನು ಪ್ರೇರೇಪಿಸಿ: ಅಬ್ದುರ್ರವೂಫ್ ಪುತ್ತಿಗೆ

Update: 2017-05-24 18:12 GMT

ಮಂಗಳೂರು, ಮೇ 24: ಸಿಐಜಿಎಂಎ (ಕ್ಯಾರಿಯರ್ ಇನ್ಫಾರ್ಮೇಶನ್ ಆ್ಯಂಡ್ ಗೈಡೆನ್ಸ್ ಮೂವ್ ಮೆಂಟ್ ಫಾರ್ ಆಲ್) ಇಂಡಿಯಾ, ರಾಜ್ಯ ಸರಕಾರ ಹಾಗೂ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಮ್ಮಿಕೊಂಡಿದ್ದ “ಎಸೆಸೆಲ್ಸಿ/ಪಿಯುಸಿ ನಂತರ ಮುಂದೇನು?” ಎಂಬ ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿ ವೇತನ ಜಾಗೃತಿ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ನಗರದ ಟೌನ್ ಹಾಲ್ ನಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಆರ್ ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಕಲಿಕೆಯ ವಿಷಯ ಬಂದಾಗ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳ ತಪ್ಪುಗಳನ್ನು ಮನ್ನಿಸಬೇಕು. ಮಕ್ಕಳೂ ಪೋಷಕರೊಂದಿಗೆ ಆರೋಗ್ಯಕರ ಸಂಬಂಧವನ್ನು ಉಳಿಸಿಕೊಳ್ಳಬೇಕು. ಶಿಕ್ಷಣದ ಮೂಲಕ ದೇಶಕ್ಕೆ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಶೈಕ್ಷಣಿಕ ಸೌಲಭ್ಯಗಳು, ವೃತ್ತಿ ಮಾರ್ಗದರ್ಶನ, ವಿವಿಧ ಸವಲತ್ತುಗಳ ಬಗ್ಗೆ ಅರಿವು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ದೊರಕುವ ವಿದ್ಯಾರ್ಥಿ ವೇತನದ ಬಗ್ಗೆ ನಿರಂತರ ಮಾಹಿತಿ  ನೀಡುತ್ತಿರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇಷ್ಟೇ ಅಲ್ಲದೆ ಸಮುದಾಯದ ಸಬಲೀಕರಣಕ್ಕಾಗಿಯೂ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಟಿಆರ್ ಎಫ್ ನ ಕಾರ್ಯ ಶ್ಲಾಘನೀಯ ಎಂದರು.

ಅಡ್ಯಾರ್ ನ ಭಂಡಾರಿ ಫೌಂಡೇಶನ್ ನ ಚೇರ್ ಮೆನ್ ಮಂಜುನಾಥ್ ಭಂಡಾರಿ ಮಾತನಾಡಿ, ನಿಮ್ಮ ಮುಂದೆ ಸಾವಿರಾರು ಅವಕಾಶಗಳಿವೆ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳಿ. ನೀವು ಏನು ಮಾಡುತ್ತಿದ್ದೀರೋ ಅದರಲ್ಲೇ ಖುಷಿಪಡಿ. ಮತ್ತೊಬ್ಬರ ಒತ್ತಡ, ಪ್ರಭಾವಕ್ಕೊಳಗಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 “ಜಗತ್ತಿನ 100 ಮಂದಿಯಲ್ಲಿ 5 ಮಂದಿ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು 5ರಷ್ಟು ಜನರನ್ನು ಅನುಸರಿಸಬೇಕು ಹೊರತು ಉಳಿದ 95 ಮಂದಿಯನ್ನಲ್ಲ. ಬದಲಾವಣೆ ಎಂಬುದು ಆರಂಭದಲ್ಲಿ ಕಠಿಣವಾಗಿದ್ದರೆ, ನಂತರ ಗೊಂದಲಮಯವಾಗಿರುತ್ತದೆ ಆದರೆ ಅಂತಿಮ ಹಂತದಲ್ಲಿ ಸುಂದರವಾಗಿರುತ್ತದೆ ಎಂದು ವಿಕಾಸ್ ಪದವಿಪೂರ್ವ ಕಾಲೇಜಿನ ಸಲಹೆಗಾರ ಡಾ.ಅನಂತಪ್ರಭು ಹೇಳಿದರು.

ಆಸಕ್ತಿಗಳು ಇತರರಿಂದ ಪ್ರಭಾವಿತವಾಗಿರುತ್ತದೆ, ಆದರೆ ಇದರರ್ಥ ಇನ್ನೊಬ್ಬರನ್ನು ನಕಲು ಮಾಡುವುದು ಎಂದಲ್ಲ. ಆಸಕ್ತಿಯೆನ್ನುವುದು ನೀವೇನು ಮಾಡಬಲ್ಲಿರಿ ಎನ್ನುವುದಾಗಿದೆ ಎಂದು ಸಿಐಜಿಎಂಎ ಇಂಡಿಯಾದ ಸ್ಥಾಪಕ ಹಾಗೂ ಸಿಇಒ ಅಮೀನ್-ಎ-ಮುದಸ್ಸಿರ್ ಅಭಿಪ್ರಾಯಪಟ್ಟರು. ತಮ್ಮ ಒಲವು, ಸಾಮರ್ಥ್ಯ ಹಾಗೂ ಕೌಶಲ್ಯಕ್ಕನುಗುಣವಾಗಿ ತಮ್ಮ ಮುಂದಿನ ಶೈಕ್ಷಣಿಕ ಹೆಜ್ಜೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭ “ಎಸೆಸೆಲ್ಸಿ/ಪಿಯುಸಿ ನಂತರ ಮುಂದೇನು?” ಎನ್ನುವ ಶೈಕ್ಷಣಿಕ ಹಾಗೂ ವಿದ್ಯಾರ್ಥಿವೇತನದ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಮುಹಮ್ಮದ್ ನಝೀರ್ ಬಿಡುಗಡೆಗೊಳಿಸಿದರು. ನಂತರ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿ ವೇತನದ ಬಗ್ಗೆ ಟಿಆರ್ ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿಯ ಹಣಕಾಸು ನಿರ್ದೇಶಕ ಮುಹಮ್ಮದ್ ಫರ್ಹಾದ್, ಮಂಗಳೂರಿನ ತೇಜಸ್ ಲ್ಯಾಬ್ಸ್ ನ ಎಂ.ಡಿ. ಡಾ.ಪ್ರಕಾಶ್ ಶೆಟ್ಟಿ, ಮಂಗಳೂರಿನ ಮನಾಲ್ ಕೋಚಿಂಗ್ ಹಾಗೂ ಸ್ಟಡಿ ಸೆಂಟರ್ ನ ಎಂ.ಡಿ. ಮುಹಮ್ಮದ್ ಹನೀಫ್, ಮ್ಯಾಂಗಲೂರ್ ಮಾರ್ಕೆಂಟಿಗ್ ನ ಎಂ.ಡಿ. ಮುಹಮ್ಮದ್ ಬಸಂ, ಟಿಆರ್ ಎಫ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು.

ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಹಮೀದ್ ಕಣ್ಣೂರು ಸ್ವಾಗತಿಸಿ, ಅಸ್ಪರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಮಜೀದ್ ತುಂಬೆ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News