ಎಸೆಸೆಲ್ಸಿ ಟಾಪರ್ ಪೂರ್ಣಾನಂದಗೆ ಕೆಎಸ್ಸಾರ್ಟಿಸಿ ವಿಭಾಗದಿಂದ ಸನ್ಮಾನ
ಪುತ್ತೂರು, ಮೇ 24: ಮನೆಯಿಂದ ಕಾಲ್ನಡಿಗೆಯಲ್ಲಿ ಬಂದು ಬಳಿಕ ಸರಕಾರಿ ಬಸ್‌ನಲ್ಲಿ ಪ್ರಯಾಣಿಸಿ ವಿದ್ಯಾಭ್ಯಾಸ ಮಾಡುವ ಮೂಲಕ ಎಸೆಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಓದಿ 625 ಅಂಕವನ್ನು ಗಳಿಸಿರುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಪೂರ್ಣಾನಂದರ ಸಾಧನೆ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ವಿಭಾಗೀ ಯ ನಿಯಂತ್ರಣಾಧಿಕಾರಿ ನಾಗರಾಜ್ ಹೇಳಿದ್ದಾರೆ.
ಅವರು ಬುಧವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಟಾಪರ್ ವಿದ್ಯಾರ್ಥಿ ಪೂರ್ಣಾ ನಂದ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರ.
ಪೂರ್ಣಾನಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಶೇ.99 ಅಂಕ ಪಡೆದ ಶಶಾಂಕ್ ಎಸ್.ಎಲ್ ಅವರನ್ನು ಗೌರವಿಸಲಾಯಿತು.
ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ, ರಂಗನಟ ಚಿದಾನಂದ ಕಾಮತ್ ಕಾಸರಗೋಡು, ಕೆಎಸ್ಸಾರ್ಟಿಸಿಯ ತಾಂತ್ರಿಕ ಅಭಿಯಂತರ ವೇಣುಗೋಪಾಲ್, ಸಿಬ್ಬಂದಿ ಶಾಂತರಾಮ ಶೆಟ್ಟಿ, ಪೂರ್ಣಾನಂದರ ತಂದೆ ವಿಷ್ಣುಮೂರ್ತಿ ಉಪಾಧ್ಯಾಯ, ತಾಯಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು.
ಕೆಎಸ್ಸಾರ್ಟಿಸಿ ವಿಭಾಗೀಯ ಅಂಕಿ ಅಂಶ ಅಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ತುಕರಾಮ್ ವಂದಿಸಿದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅನುಕೂಲವಾದ ಬಸ್ ವ್ಯವಸ್ಥೆ
ನಾನು ಮನೆಯಿಂದ ನಡೆದುಕೊಂಡು ಬಂದು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಗ್ಗೆ ಕೆಲವೊಮ್ಮೆ ಬಸ್ ಲೇಟಾಗಿ ಬಂದರೂ ಸಂಜೆ ಸರಿಯಾದ ಸಮಯಕ್ಕೆ ಬರುತ್ತಿತ್ತು. ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಬಸ್‌ನ ವ್ಯವಸ್ಥೆ ಇದೆ. ನನ್ನನ್ನು ಗೌರವಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ.
- ಪೂರ್ಣಾನಂದ