ನಾಳೆಯಿಂದ ಸಸಿಹಿತ್ಲುವಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್

Update: 2017-05-24 18:41 GMT

ಮಂಗಳೂರು, ಮೇ 24: ನಗರದ ಹೊರವಲಯದ ಸಸಿಹಿತ್ಲು ಬಳಿಯ ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಮೇ 26ರಿಂದ 28ರವರೆಗೆ ನಡೆಯಲಿದ್ದು, ಇದಕ್ಕಾಗಿ ದೇಶ ವಿದೇಶದ ಸರ್ಫರ್‌ಗಳಿಂದ ತರಬೇತಿ, ಡೆಮೊ (ಅಣುಕು ಪ್ರದರ್ಶನ) ಭರದಿಂದ ಸಾಗಿದೆ. ಡೆಮೊ ಪ್ರದರ್ಶನವೇ ಮೈನವಿರೇಳಿಸುತ್ತಿದ್ದು, ಕಡಲ ಅಬ್ಬರದ ಅಲೆಗಳ ನಡುವೆ ಉತ್ಸವದಲ್ಲಿ ಸ್ಪರ್ಧಿಗಳ ಹಣಾಹಣಿ ಇದೀಗ ತೀವ್ರ ಕುತೂಹಲವನ್ನು ಕೆರಳಿಸುತ್ತಿದೆ. ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ ಸಸಿಹಿತ್ಲುವಿನ ಕಡಲ ಅಲೆಗಳ ಅಬ್ಬರದ ಜತೆ ಸುಮಾರು 35ಕ್ಕೂ ಅಧಿಕ ಸರ್ಫರ್‌ಗಳು ಅಂತಾರಾಷ್ಟ್ರೀಯ ಸ್ಪರ್ಧೆಗಾಗಿ ತಯಾರಿ ನಡೆಸಿದರು. 

ಸರ್ಫಿಂಗ್ ಸ್ಪರ್ಧೆಯ ಈ ಅಂತಾರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಗೋವಾ, ಪಾಂಡಿಚೇರಿ, ತಮಿಳುನಾಡಿನಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಮೊದಲಾದ ಸರ್ಫಿಂಗ್ ಕ್ಲಬ್‌ಗಳ ಸದಸ್ಯರ ಜತೆಯಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಕಡಲ ಅಲೆಗಳ ಜತೆ ಸೆಣಸಾಡಲು ತಯಾರಿ ನಡೆಸುತ್ತಿದ್ದಾರೆ. ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಸುಮಾರು 200ಕ್ಕೂ ಅಧಿಕ ಸ್ಪರ್ಧಿಗಳು ಮೂರು ದಿನಗಳ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಫ್ರಾನ್ಸ್, ಮಾಲ್ಡೀವ್ಸ್, ಮಡಾಸ್ಕರ್ ಮೊದಲಾದ ವಿದೇಶಿ ಅಂತಾರಾಷ್ಟ್ರೀಯ ಸರ್ಫರ್‌ಗಳು ಹೆಸರು ನೋಂದಾಯಿಸಿದ್ದಾರೆ. ವಿಶೇಷವೆಂದರೆ ಈ ಸ್ಪರ್ಧೆಯಲ್ಲಿ ಏಳು ವರ್ಷದಿಂದ 71 ವರ್ಷದವರೆಗಿನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮಹಿಳೆಯರಿಗೂ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಯ ಜತೆಗೆ ವಯೋಮಿತಿಯ ಆಧಾರದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧೆಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದ್ದು, ಸುಮಾರು ಒಂಬತ್ತು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಪಾರ್ಕಿಂಗ್ ಸ್ಥಳದಿಂದ ಸ್ಪರ್ಧೆ ನಡೆಯುವ ಕಡೆಗೆ ಮಿನಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗುತ್ತಿದೆ. ಉತ್ಸವದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸರ್ಫಿಂಗ್ ಸ್ಪೆಷಲಿಸ್ಟ್ ಜಾಂಟಿ ರೋಡ್ಸ್, ಐಪಿಎಲ್ ಹೀರೋ ಸಂಜು ಸ್ಯಾಮ್ಸನ್ ಮೊದಲಾದವರು ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವ ಮೂರು ದಿನಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 4 ರವರೆಗೆ ನಡೆಯಲಿದೆ. ಇದಲ್ಲದೆ ಬೀಚ್ ವಾಲಿಬಾಲ್, ಕೈಟ್ (ಗಾಳಿಪಟ) ಸರ್ಫಿಂಗ್, ಆಹೋರೋತ್ಸವದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ವಾಲ್ ಕ್ಲೈಮಿಂಗ್, ಸ್ಕೇಟ್ ಬೋರ್ಡ್ ಸೇರಿದಂತೆ ಪುರುಷರ 10 ಕಿ.ಮೀ. ಸ್ಪೀಡ್ ರೇಸ್ ಹಾಗೂ ಮಹಿಳೆಯರ 5 ಕಿ.ಮೀ. ಸ್ಟಾಂಡ್ ಆಫ್ ಪ್ಯಾಡ್ಲಿಂಗ್ ಕ್ರೀಡೆಗಳನ್ನೂ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News