ಕೊರಗ ಸಮುದಾಯದ ಜಿಲ್ಲಾ ಮಟ್ಟದ ಕ್ರೀಡೋತ್ಸವ

Update: 2017-05-24 18:41 GMT

ಉಡುಪಿ, ಮೇ 24: ಜಿಲ್ಲಾ ಯುವ ಸಬಲಕೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ವತಿಯಿಂದ ಕೊರಗ ಸಮುದಾಯದ ಯುವಕ/ಯುವತಿಯರಿಗೆ ಮತ್ತು ಬಾಲಕ /ಬಾಲಕಿಯರಿಗೆ ಜಿಲ್ಲಾ ಮಟ್ಟದ ಕ್ರೀಡೋತ್ಸವ ಮೇ 26ರಂದು ಸಂಜೆ 6:30ಕ್ಕೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡೋತ್ಸವವನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು.

ಾಗವಹಿಸುವ ಕೊರಗ ಕ್ರೀಡಾಪಟುಗಳ ನೋಂದಣಿ ಮೇ 26ರಂದು ಅಪರಾಹ್ನ 3ರಿಂದ ಬಸ್‌ನಿಲ್ದಾಣದ ಬಳಿ ಇರುವ ಬೋರ್ಡ್ ಶಾಲೆಯಲ್ಲಿ ನಡೆಯಲಿದೆ. ಬಳಿಕ ಬೋರ್ಡ್ ಶಾಲೆಯಿಂದ ಕ್ರೀಡಾಂಗಣದವರೆಗೆ ಕೊರಗ ಸಮುದಾಯದ ಕ್ರೀಡಾಪಟುಗಳಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಉಪಹಾರ, ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. 14 ವರ್ಷ ವಯೋಮಿತಿಯೊಳಗಿನ ಬಾಲಕ/ ಬಾಲಕಿಯರಿಗೆ 100ಮೀ. ಓಟ, 400ಮೀ. ಓಟ, ಉದ್ದಜಿಗಿತ, ಗುಂಡೆಸೆತ ಹಾಗೂ 100ಮೀ. ರಿಲೇ ಸ್ಪರ್ಧೆಗಳಿವೆ. 20 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ 100ಮೀ. ಓಟ, 800ಮೀ. ಓಟ, ಉದ್ದಜಿಗಿತ, ಗುಂಡೆಸೆತ ಮತ್ತು 100ಮೀ. ರಿಲೇ ಸ್ಪರ್ಧೆಗಳು ನಡೆಯಲಿವೆ. ಇವುಗಳಲ್ಲಿ ವಿಜೇತರಾದ ಮೊದಲ ಮೂರು ಸ್ಥಾನಿಗಳಿಗೆ ಕ್ರಮವಾಗಿ 800 ರೂ., 600 ರೂ. ಹಾಗೂ 400 ರೂ. ನಗದು ಬಹುಮಾನ ನೀಡಲಾಗುವುದು.

ಕೊರಗ ಸಮುದಾಯದ ಯುವಕರಿಗೆ ವಾಲಿಬಾಲ್, ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಹೊನಲು ಬೆಳಕಿನಲ್ಲಿ ನಡೆಸಲಾಗುವುದು. ಪ್ರಥಮ ಬಾರಿಗೆ ಕಬಡ್ಡಿ ಪಂದ್ಯಾಟಗಳನ್ನು ಕಬಡ್ಡಿ ಮ್ಯಾಟ್‌ನಲ್ಲಿ ಆಡಿಸಲಾಗುವುದು. ವಿಜೇತರಿಗೆ 6,000ರೂ. ನಗದು ಮತ್ತು ಪ್ರಶಸ್ತಿ ಫಲಕ, ದ್ವಿತೀಯ ಸ್ಥಾನಿಗೆ 3,000 ರೂ. ಹಾಗೂ ಪ್ರಶಸ್ತಿ ಫಲಕ ದೊರೆಯಲಿದೆ.

ಯುವತಿಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಕಬಡ್ಡಿ ಸ್ಪರ್ಧೆಗಳಿದ್ದು, ವಿಜೇತರಿಗೆ 6,000 ರೂ. ನಗದು, ಪ್ರಶಸ್ತಿ ಫಲಕ, ದ್ವಿತೀಯ ಸ್ಥಾನಿಗೆ 3,000 ರೂ. ನಗದು, ಪ್ರಶಸ್ತಿ ಫಲಕವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂ.ಸಂ.:0820-2521324 ಹಾಗೂ 9845432303)ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News