ಪ್ರೊ.ಇಚ್ಲಂಗೋಡುರವರ ‘ಬ್ಯಾರಿ ಭಾಷೆ ದ್ರಾವಿಡ ಭಾಷೆ’ ಸಂಶೋಧನಾ ಕೃತಿ ಬಿಡುಗಡೆ

Update: 2017-05-25 08:04 GMT

ಮಂಗಳೂರು, ಮೇ 25: ಪ್ರೊ. ಬಿ.ಎಂ.ಇಚ್ಲಂಗೋಡುರವರ ‘ಬ್ಯಾರಿ ಭಾಷೆ ದ್ರಾವಿಡ ಭಾಷೆ’ ಸಂಶೋಧನಾ ಕೃತಿಯನ್ನು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಡಾ.ಬಿ.ಸುರೇಂದ್ರ ರಾವ್ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಬ್ಯಾರಿ ಭಾಷೆ ದ್ರಾವಿಡ ಭಾಷೆ ಎಂಬ ಪ್ರತಿಪಾದನೆಯನ್ನು ಇಚ್ಲಂಗೋಡು ತಮ್ಮ ಸಂಶೋಧನಾ ಕೃತಿಯ ಮೂಲಕ ಮಾಡಿದ್ದಾರೆ ಎಂದರು.

ಯಾವ ಭಾಷೆಯೂ ಸ್ವತಂತ್ರವಾಗಿರುವುದಿಲ್ಲ. ಒಂದು ಭಾಷೆ ಇನ್ನೊಂದು ಭಾಷೆಯ ಸಂಪರ್ಕ ಇಟ್ಟುಕೊಂಡೇ ಬೆಳೆಯುತ್ತದೆ. ಭಾಷೆಯಲ್ಲಿ ಎರವಲು ಪಡೆಯುವುದು ಸ್ವಾಭಾವಿಕವಾಗಿದ್ದು, ಇದರಿಂದಾಗಿಯೇ ಭಾಷೆಯು ಬೆಳವಣಿಗೆಯಾಗುತ್ತವೆ. ಒಂದು ಕಾಲದಲ್ಲಿ ಮಾಪ್ಲ ಮಲಯಾಳದ ಒಂದು ಭಾಗ ಎಂದು ಬ್ಯಾರಿ ಭಾಷೆಯನ್ನು ಪರಿಗಣಿಸಲಾಗಿತ್ತು. ಆದರೆ ಬ್ಯಾರಿ ಭಾಷೆ ದ್ರಾವಿಡ ಭಾಷೆಗಳಲ್ಲಿ ಒಂದು ಎಂಬುದನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಬ್ಯಾರಿ ಭಾಷೆ ದ್ರಾವಿಡ ಭಾಷೆಯೇ ಎಂಬ ಪ್ರಶ್ನೆಗೆ ಇದು ಕೊನೆಯ ಉತ್ತರ ಎಂದು ಹೇಳಲಾಗದು. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ಹೊರಬರುವ ಸಾಧ್ಯತೆಗಳೂ ಇವೆ. ಬ್ಯಾರಿ ಭಾಷೆ ತನ್ನದೇ ಆದ ರೀತಿಯ ಅನನ್ಯತೆಯನ್ನು ಬೆಳೆಸಿಕೊಂಡು ಬಂದಿದೆ ಎಂದು ಅವರು ಅಭಿಪ್ರಾಯಿಸಿದರು.

ಕೃತಿಯಲ್ಲಿ ಬ್ಯಾರಿ ಭಾಷೆ ದ್ರಾವಿಡ ಭಾಷೆ ಎಂದು ತೋರಿಸುವ ಆಧಾರಗಳು ಮತ್ತು ಪ್ರಾಚೀನತೆಯ ಕುರಿತು ಉಲ್ಲೇಖವಿದೆ. ಬ್ಯಾರಿಗಳಲ್ಲಿದ್ದ ಬರಹ ‘ಬಟ್ಟೆಲುತ್ತು’ ಶಾಸನಗಳು ಮತ್ತು ಬರಹಗಳು, ಬಟ್ಟೆಲುತ್ತು ಲಿಪಿ, ತುಳು ಲಿಪಿ, ಮಲಯಾಳ ಲಿಪಿಮತ್ತು ತಮಿಳು ಲಿಪಿಗಳಿಗಿರುವ ಹೋಲಿಕೆಯ ಸಮರ್ಥನೆ. ಬ್ಯಾರಿಗಳಲ್ಲಿ ಬಳಕೆಯಲ್ಲಿದ್ದ ಅರಬಿ, ಮಲಯಾಳ ಲಿಪಿಯ ಸಾಹಿತ್ಯ ಮತ್ತು ಹಾಡುಗಳ ಪ್ರಭಾ, ಸೆಬಿನಾ ಸಂಸ್ಕೃತಿಯ ಪ್ರಭಾ, ಬ್ಯಾರಿ ಭಾಷೆಯ ಸ್ವಂತಿಕೆ, ಪದ ಬಳಕೆ, ವ್ಯಾಕರಣ ಮತ್ತು ಮಲಯಾಳಕ್ಕಿಂತ ಪ್ರಾಚೀನವೆಂಬ ಸಮರ್ಥನೆ. ತುಳು ಬ್ಯಾರಿ ಭಾಷೆಗಳು ಸಹೋದರ ಭಾಷೆಯಂತಿದ್ದು, ಪ್ರಾಚೀನ ಭಾಷೆ ಎಂದೂ ದ್ರಾವಿಡ ಭಾಷಾ ಮೂಲದ ಭಾಷೆ ಎಂದೂ ಭಾಷಾ ತಜ್ಞರೂ ಅಭಿಪ್ರಾಯಿಸಿದ್ದಾರೆ ಎಂದು ಕೃತಿಕಾರ ಪ್ರೊ. ಬಿ.ಎಂ. ಇಚ್ಲಂಗೋಡು ತಮ್ಮ ಕೃತಿಯಲ್ಲಿ ಉಲ್ಲೇಖಿಸಲಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.

ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಮೂಡಬಿದ್ರೆ ಕನ್ನಡ ಸಂಘದ ಕೋಶಾಧಿಕಾರಿ ಜೀವನ್, ಕುಮಾರ್ ಜೈನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News