ಮೇ 26ರಿಂದ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಆರಂಭ

Update: 2017-05-25 13:13 GMT

* ಬಾಲಿವುಡ್ ನಟ ಸುನಿಲ್ ಶೆಟ್ಟಿ ಉತ್ಸವದ ರಾಯಭಾರಿ

ಮಂಗಳೂರು, ಮೇ 25: ಸಸಿಹಿತ್ಲು ಬಳಿಯ ಕಡಲ ತೀರದಲ್ಲಿ ಇದೇ ಮೊದಲ ಬಾರಿಗೆ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆ ಮೇ 26ರಂದು ಆರಂಭಗೊಳ್ಳಲಿದ್ದು, ಉತ್ಸವಕ್ಕಾಗಿ ಸಸಿಹಿತ್ಲು ಬೀಚ್ ಆಕರ್ಷಕ ತಾಣವಾಗಿ ರೂಪು ಪಡೆದಿದೆ. ಇದೇ ವೇಳೆ, ಇಂಡಿಯನ್ ಓಪನ್ ಸರ್ಫಿಂಗ್‌ನಿಂದ ಬಾಲಿವುಡ್ ನಟ ಹಾಗೂ ಸ್ಥಳೀಯರೂ ಆಗಿರುವ ಸುನಿಲ್ ಶೆಟ್ಟಿ ಅವರನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವದ ರಾಯಭಾರಿಯನ್ನಾಗಿ ಘೋಷಿಸಲಾಗಿದೆ.

‘‘ಸರ್ಫಿಂಗ್ ಮೈನವಿರೇಳಿಸುವ ಕ್ರೀಡೆಯಾಗಿದ್ದು, ಇದು ಭಾರತೀಯರ ಕಣ್ಮನಗಳನ್ನು ಸೆಳೆಯಲಿದೆ. ಈ ಕ್ರೀಡೆಯು ಭಾರತದ ಕರವಳಿ ತೀರದ ಸ್ಥಳೀಯರಿಗೆ ಉದ್ಯೋಗದ ಮತ್ತು ಆದಾಯದ ಮೂಲವನ್ನೂ ಒದಗಿಸಿದೆ. ಕರಾವಳಿಯ ಕಡಲ ತೀರದಲ್ಲಿ ಸಾಧ್ಯವಿರುವ ಸಾಹಸ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಕರ್ನಾಟಕ ಸರಕಾರ ಮತ್ತು ಮಂತ್ರ ಸರ್ಫ್ ಕ್ಲಬ್‌ನ ಸಹಕಾರ ಶ್ಲಾಘನೀಯ’’ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಈಗಾಗಲೇ ಸರ್ಫಿಂಗ್ ಉತ್ಸವದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

‘‘ಬಾಲಿವುಡ್ ನಟ ಸುನಿಲ್ ಶೆಟ್ಟಿಯವರು ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವದ ರಾಯಭಾರಿಯಾಗಿರುವುದು ನಮ್ಮೆಲ್ಲರನ್ನು ಪುಳಕಿತರನ್ನಾಗಿಸಿದೆ. ಅವರು ಸ್ಥಳೀಯರೂ ಆಗಿರುವುದರಿಂದ ಸ್ಥಳೀಯ ಯುವಕರಲ್ಲಿ ಮತ್ತಷ್ಟು ಉತ್ಸಾಹ ಹಾಗೂ ಪ್ರೇರಣೆಯನ್ನು ತುಂಬಲಿದೆ. ಕ್ರೀಡೆಯಾಗಿ ಸರ್ಫಿಂಗನ್ನು ಬೆಳೆಸುವಲ್ಲಿ ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲದ ಅಗತ್ಯವಿದೆ’’ ಎಂದು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕಿಶೋರ್ ಕುಮಾರ್ ಅಭಿಪ್ರಾಯಿಸಿದ್ದಾರೆ.

ಮೇ 26ರಿಂದ ಮೂರು ದಿನಗಳ ಕಾಲ ಈ ಸರ್ಫಿಂಗ್ ಉತ್ಸವ ನಡೆಯಲಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ಸರ್ಫರ್‌ಗಳು ಸೇರಿದಂತೆ ಒಟ್ಟು 120 ಮಂದಿ ಸರ್ಫರ್‌ಗಳು ಕಡಲ ಅಲೆಗಳ ಏರಿಳಿತದಲ್ಲಿ ತಮ್ಮ ಸಾಹಸ ಪ್ರದರ್ಶನವನ್ನು ನೀಡಲಿದ್ದಾರೆ. ಮೇ 26ರಂದು ಬೆಳಗ್ಗೆ 7:30ರಿಂದ ಸ್ಪರ್ಧೆ ಆರಂಭಗೊಳ್ಳಲಿದೆ.

ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕರ್ನಾಟಕ ಮಾತ್ರವಲ್ಲದೆ, ವಿವಿಧ ರಾಜ್ಯ ಹಾಗೂ ವಿದೇಶಿ ಸರ್ಫರ್‌ಗಳಿಂದ ಅಬ್ಬರದ ಕಡಲ ಅಲೆಗಳ ನಡುವೆ ತರಬೇತು ಇಂದು ಕೂಡಾ ಮುಂದುವರಿಯಿತು.

ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News