×
Ad

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಧರಣಿ

Update: 2017-05-25 18:23 IST

ಉಡುಪಿ, ಮೇ 25: ಬಿಸಿಯೂಟ ಯೋಜನೆಯಲ್ಲಿ ದುಡಿಯುವ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರು ವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸರಕಾರ ಬಿಸಿಯೂಟ ಯೋಜನೆಗೆ ಕಡಿತ ಮಾಡಿರುವ ಅನುದಾನ ವಾಪಸ್ ನೀಡಬೇಕು. ಯೋಜನೆಯನ್ನು ಯಾವುದೇ ಸಂಘ ಸಂಸ್ಥೆಗಳಿಗೆ ವಹಿಸಿ ಕೊಡಬಾರದು. ರಾಜ್ಯ ಸರಕಾರಕ್ಕೆ ಇಲಾಖೆಯಿಂದ ಶಿಫಾರಸ್ಸು ಆಗಿರುವ 4000ರೂ. ಕೂಡಲೇ ಜಾರಿ ಆಗಬೇಕು. ಅನುದಾನದಲ್ಲಿ ಉಳಿದಿರುವ ಹಣದಲ್ಲಿ ಸಾಮಾಜಿಕ ಭದ್ರತೆಯ ಭಾಗವಾಗಿ ಪೆನ್ಶನ್ ನೀಡಬೇಕು. ಬಿಸಿಯೂಟ ನೌಕರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಮತ್ತು ನೇಮಕಾತಿ ಪತ್ರ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ನೌಕರರನ್ನು ಹಾಜರಾತಿ ನೆಪವೊಡ್ಡಿ ಕೆಲಸದಿಂದ ಕೈ ಬಿಡಬಾರದು. ಬಿಸಿಯೂಟ ನೌಕರರನ್ನು ಶಾಲಾ ಸಿಬ್ಬಂದಿ ಎಂಬುದಾಗಿ ಪರಿಗಣಿಸಬೇಕು. ಬೇಸಿಗೆ ರಜಾ ವೇತನವನ್ನು ನೀಡ ಬೇಕು. ಸೇವಾ ನಿಯಮಾವಳಿ ಜಾರಿ ಮಾಡಬೇಕು. ವೇತನ ನಿಗದಿತ ದಿನಾಂಕ ದಲ್ಲಿ ಪ್ರತಿ ತಿಂಗಳು ನೀಡಬೇಕು. ಆಘಾತವಾದಾಗ ಪರಿಹಾರ ಮೊತ್ತ ತಕ್ಷಣವೇ ನೀಡಬೇಕು. ಗುಣಮಟ್ಟ ಹಾಗೂ ಸರಿಯಾದ ಪ್ರಮಾಣದ ಆಹಾರ ದಾನ್ಯ ವನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಜಿಪಂ ನೋಡೆಲ್ ಅಧಿಕಾರಿ ನಯನಾ ಮೂಲಕ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುನಂದಾ, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ವೆಂಕಟೇಶ್ ಕೋಣಿ, ಕವಿರಾಜ್ ಎಸ್., ನೌಕರರಾದ ಜಯಶ್ರೀ ಬೈಂದೂರು, ಸಿಂಗಾರಿ, ಲತಾ, ಸುಜಾತ ಶೆಟ್ಟಿ, ಕಮಲ, ಸುನೀತಾ ಶೆಟ್ಟಿ, ಜಯಶ್ರೀ ಕಾರ್ಕಳ, ಬೇಬಿ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News