×
Ad

ತ್ಯಾಜ್ಯ ಮುಕ್ತ ಮಜೂರು ಗ್ರಾಮ ನಿರ್ಮಾಣಕ್ಕೆ ಸಂಕಲ್ಪ

Update: 2017-05-25 18:28 IST

ಕಾಪು, ಮೇ 25: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸುಡದೆ, ಮನೆ ಮನೆಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿ ಸಮರ್ಪಕವಾಗಿ ನಿರ್ವಹಿಸಿ ಗ್ರಾಪಂ ಮೂಲಕ ಮರುಬಳಕೆ ಕೇಂದ್ರಕ್ಕೆ ರವಾನಿಸಿ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಮಜೂರು ಮಹಿಳಾ ಜಾಗೃತಿ ವೇದಿಕೆ ಸಂಕಲ್ಪಮಾಡಿದೆ.

ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರಾಜೆಕ್ಟ್, ಸುಗ್ರಾಮ ಸಂಘ, ಗ್ರಾಮ ಪಂಚಾಯತ್ ಹಾಗೂ ಅಂಗನವಾಡಿ ಕೇಂದ್ರಗಳ ಸಹಭಾಗಿತ್ವದಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆದ ಮಹಿಳಾ ಜಾಗೃತಿ ವೇದಿಕೆಯ ಜಾಗೃತಿ ಸಭೆ- ಸಂವಾದ ಕಾರ್ಯಕ್ರಮದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಮಹಾತ್ಮಾಗಾಂಧಿ ನರೇಗಾದ ಮಾಜಿ ಓಂಬಡ್ಸ್‌ಮನ್ ಶೀನ ಶೆಟ್ಟಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವ, ಸುಡುವ, ಕೆಟ್ಟ ಅಭ್ಯಾಸದಿಂದಾಗಿ ಜೀವ ಸಂಕುಲ ಹಾಗೂ ಪರಿಸರದ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು.

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮನೆ ಮನೆಗಳಲ್ಲಿ ಸುಲಭವಾಗಿ ಮತ್ತು ಸಮರ್ಪಕ ವಾಗಿ ನಿರ್ವಹಿಸುವ ವಿಧಾನಗಳ ಬಗ್ಗೆ ಯಶೋಗಾಥೆಗಳೊಂದಿಗೆ ಮಾಹಿತಿ ನೀಡಿದರು. ಜಲ ಸಾಕ್ಷರತೆ, ಮಹಾತ್ಮಾಗಾಂಧಿ ನರೇಗಾ, ಸೌರ ವಿದ್ಯುತ್ ಇತ್ಯಾದಿ ವಿಷಯಗಳ ಬಗ್ಗೆಯೂ ಮಾಹಿತಿ ಮಿನಿಮಯ ಚರ್ಚೆ ನಡೆಸ ಲಾಯಿತು.

ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹನಾ ತಂತ್ರಿ, ತಾಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಮೋಹಿನಿ, ಸುಗ್ರಾಮ ಸಂಘದ ಕಾರ್ಯದರ್ಶಿ ಸೌಮ್ಯಲತಾ ಶೆಟ್ಟಿ ಉಪಸ್ಥಿತರಿದ್ದರು.

ಮಜೂರು ಸುಗ್ರಾಮ ಸಂಘದ ಸುರೇಖಾ ಶೆಟ್ಟಿ ಸಂವಾದವನ್ನು ಸಂಯೋಜಿಸಿ ದ್ದರು. ಪಂಚಾಯತ್ ಸದಸ್ಯೆ ಜಯಂತಿ, ಕಾರ್ಯದರ್ಶಿ ಸೀತಾ, ಅಂಗನವಾಡಿ ಕಾರ್ಯಕರ್ತರಾದ ಸುನೀತಾ, ಶುಭಾ, ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News