×
Ad

ವಿಶ್ವ ಯೋಗ ದಿನಾಚರಣೆಗೆ ಭರದ ಸಿದ್ಧತೆ

Update: 2017-05-25 19:02 IST

ಹೊಸದಿಲ್ಲಿ, ಮೇ 25: ಸಾಂಪ್ರದಾಯಿಕ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯೋಗ ಚಟುವಟಿಕೆಗೆಂದೇ ಮೀಸಲಾದ ನೂರು ಯೋಗ ಪಾರ್ಕ್‌ಗಳನ್ನು ದೇಶದಾದ್ಯಂತ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

 ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆರಂಭಿಸಲಿರುವ ಯೋಗ ಪಾರ್ಕ್‌ಗಳ ಉಸ್ತುವಾರಿಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ಅಥವಾ ಯೋಗ ಕಲಿಕಾ ಸಂಸ್ಥೆಗಳಿಗೆ ವಹಿಸಿಕೊಡಲಾಗುವುದು ಎಂದು ‘ಆಯುಷ್’ ಇಲಾಖೆಯ ಉಪಸಚಿವ ಶ್ರೀಪಾದ ಯೆಸ್ಸೊ ನಾಕ್ ತಿಳಿಸಿದರು.

 ಲಕ್ನೊದಲ್ಲಿ ಜೂ.21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯ ಪ್ರಧಾನ ಸಮಾರಂಭದಲ್ಲಿ ಪ್ರಧಾನಿ ಮೋದಿ, ಹಿರಿಯ ಸಚಿವರು, ಉ.ಪ್ರದೇಶದ ಮುಖ್ಯಮಂತ್ರಿ, ಯೋಗ ಗುರುಗಳ ಜೊತೆಗೆ ಸುಮಾರು 51,000 ಜನರು ಭಾಗವಹಿಸಲಿದ್ದಾರೆ.

 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸುಮಾರು 150 ರಾಷ್ಟ್ರಗಳು ಪಾಲ್ಗೊಳ್ಳಲಿದ್ದು ಆಯಾ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಾರ್ಯಕ್ರಮ ಸಂಘಟಿಸಲಿದೆ. ಪ್ರಮುಖ ಐತಿಹಾಸಿಕ ಸ್ಥಳಗಳಾದ ಪ್ಯಾರಿಸ್‌ನ ಐಫೆಲ್ ಟವರ್, ಲಂಡನ್‌ನ ಟ್ರಫಲ್‌ಗರ್ ಚೌಕ ಮತ್ತು ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವರು ತಿಳಿಸಿದರು.

   ಯೋಗದಲ್ಲಿ ಭಾರತದ ಸರ್ವಶ್ರೇಷ್ಠತೆಯನ್ನು ವಿಶ್ವ ಅರಿತುಕೊಂಡಿದೆ ಎಂಬುದು ಅತಿಶಯೋಕ್ತಿಯಲ್ಲ. ಕಳೆದ ಎರಡು ವರ್ಷ ನಡೆದ ಯೋಗ ದಿನಾಚರಣೆಯಲ್ಲಿ 190ಕ್ಕೂ ಹೆಚ್ಚು ರಾಷ್ಟ್ರಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು. ಯೋಗವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಅಸಾಧಾರಣ ಕೊಡುಗೆ ನೀಡಿದವರಿಗೆ ನೀಡಲಾಗುವ ಪ್ರಧಾನ ಮಂತ್ರಿಯವರ ಪುರಸ್ಕಾರವನ್ನು ವ್ಯಕ್ತಿಗಳಿಗೆ ಅಥವಾ ಸಂಘಟನೆಗಳಿಗೆ ನೀಡಲಾಗುವುದು. ಎರಡು ವಿಭಾಗಗಳಲ್ಲಿ ತಲಾ ಎರಡು ಪುರಸ್ಕಾರವಿದ್ದು ‘ಆಯುಷ್’ ಕಾರ್ಯದರ್ಶಿ ಅಧ್ಯಕ್ಷತೆಯ ಪರಾಮರ್ಶನ ಸಮಿತಿ ಸೂಕ್ತ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಲಿದೆ. ಸಂಪುಟ ಕಾರ್ಯದರ್ಶಿ ನೇತೃತ್ವದ ತೀರ್ಪುಗಾರರ ಸಮಿತಿ ಪುರಸ್ಕಾರ ವಿಜೇತರನ್ನು ಆಯ್ಕೆ ಮಾಡಲಿದೆ. ದಿಲ್ಲಿಯಲ್ಲಿ ಹಲವೆಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಗವನ್ನು ದೈನಂದಿನ ಬದುಕಿನ ಅವಿಭಾಜ್ಯ ಪ್ರಕ್ರಿಯೆಯನ್ನಾಗಿಸಿಕೊಳ್ಳುವಂತೆ ಆಯುಷ್ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವವರಲ್ಲಿ ವಿನಂತಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಧಾನಿ ಮೋದಿಯವರ ಕೋರಿಕೆಯ ಸ್ಪಂದಿಸಿದ್ದ ವಿಶ್ವಸಂಸ್ಥೆ, ಪ್ರತೀ ವರ್ಷದ ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸುವುದಾಗಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News