ಗ್ರಾಮ ಸ್ವಚ್ಚತೆಗೆ ಮನಸ್ಸು ಸ್ವಚ್ಚತೆ ಪ್ರಾಮುಖ್ಯ ಭವಾನಿ ಚಿದಾನಂದ
ಪುತ್ತೂರು,ಮೇ 25: ಗ್ರಾಮೀಣ ಪ್ರದೇಶಗಳಲ್ಲಿ ಸಪರ್ಮಕವಾಗಿ ಕಸ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗ್ರಾಮ ಸ್ವಚ್ಚತೆಗೆ ಆದ್ಯತೆ ನೀಡಬೇಕಾಗಿದ್ದು, ಈ ವಿಚಾರದಲ್ಲಿ ಮನಸ್ಸು ಸ್ವಚ್ಚವಾದರೆ ಗ್ರಾಮವೂ ಸ್ವಚ್ಚವಾಗಲು ಸಾದ್ಯ ಎಂದು ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ ಹೇಳಿದರು.
ಅವರು ಗುರುವಾರ ಸಂಜೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮಿಷನ್ ಮತ್ತು ತಾಲೂಕು ಪಂಚಾಯತ್ ಪುತ್ತೂರು ಇದರ ಸಹಯೋಗದಲ್ಲಿ ‘ಸ್ವಚ್ಚತಾ ನೀತಿ 2017’ ಅಂಗವಾಗಿ ಗ್ರಾಮ ಪಂಚಾಯತ್‌ಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅಬಿಯಾನ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಸ್ವಚ್ಚತೆಯ ಪರಿಕಲ್ಪನೆ ಸಕಾರಗೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ. ಕಸ ವಿಲೇವಾರಿಗೆ ಅಲ್ಲಲ್ಲಿ ತೊಟ್ಟಿ ನಿರ್ಮಿಸುವ ಕೆಲಸವಾಗಬೇಕು. ಗ್ರಾಮ ಸ್ವಚ್ಚತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಂಘ ಸಂಸ್ಥೆಗಳು ಕೈಜೋಡಿಸಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ ಎಂದರು.
ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿರುವ ಗ್ರಾಮ ಪಂಚಾಯತ್‌ಗಳು ಅದರ ಹೆಸರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಹೆಸರಿಗಾಗಿ ಪ್ರಶಸ್ತಿ ಪಡೆದುಕೊಂಡರು ಎಂದಾಗದಂತೆ ಎಚ್ಚರ ವಹಿಸಬೇಕು ಎಂದರು.
ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಾರ್ವಜನಿಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆಯುವುದರಿಂದ ಪರಿಸರ ಮಲಿನವಾಗುತ್ತಿದ್ದು, ಸ್ವಚ್ಚತೆ ಎಂಬುದು ಮಾತಿನಿಂದಲ್ಲ ಮನಸ್ಸಿನಿಂದ ಬರಬೇಕು. ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಹಲವು ಭಾರಿ ಚರ್ಚೆಗಳು ನಡೆದಿದ್ದು, ಇದೀಗ ಗ್ರಾಮ ಪಂಚಾಯತ್‌ಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಪರಿಹಾರ ರೂಪದಲ್ಲಿ ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತಾಲೂಕು ಪಂಚಾಯತ್ ಯೋಜನಾಧಿಕಾರಿ ಗಣಪತಿ ಭಟ್ ಮತ್ತು ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಉಪಸ್ಥಿತರಿದ್ದರು. ವಿಷಯ ನಿರ್ವಾಹಕ ಶಿವಪ್ರಕಾಶ್ ಅಡ್ಪಂಗಾಯ ಸ್ವಾಗತಿಸಿ ವಂದಿಸಿದರು.