ತುಂಬೆ: ಬೈಕ್ ನಲ್ಲಿ ಬಂದು ಮಹಿಳೆಯ ನಗ-ನಗದು ದೋಚಿದ ಕಳ್ಳರು
ಬಂಟ್ವಾಳ, ಮೇ 25: ಮಹಿಳೆಯೊಬ್ಬರ ಕೈಯಲ್ಲಿ ನಗದು, ಚಿನ್ನ, ಮೊಬೈಲ್ ಫೋನ್ ಇದ್ದ ಚೀಲವನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಎಳೆದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ತುಂಬೆಯಲ್ಲಿ ನಡೆದಿದೆ. ತುಂಬೆ ರಾಮಲ್‌ಕಟ್ಟೆ ನಿವಾಸಿ ವನಿತ ಎಂಬವರು ಇಂದು ಬೆಳಗ್ಗೆ ಬಿ.ಸಿ.ರೋಡಿನ ಬ್ಯಾಂಕೊಂದಕ್ಕೆ ತೆರಳಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಚೀಲದಲ್ಲಿ 2,500 ರೂಪಾಯಿ ನಗದು, 4,500 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಫೋನ್ ಇತ್ತು ಎಂದು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ತುಂಬೆ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಾಮಲ್‌ಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕೈಯಲ್ಲಿದ್ದ ಚೀಲವನ್ನು ಎಗರಿಸಿ ಪರಾರಿಯಾಗಿದ್ದಾರೆ. ಇಬ್ಬರೂ ಹೆಲ್ಮೇಟ್ ಧರಿಸಿದ್ದು ಬಿ.ಸಿ.ರೋಡಿನಿಂದಲೇ ಮಹಿಳೆಯನ್ನು ಫೋಲೋ ಮಾಡಿಕೊಂಡು ಬಂದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.