×
Ad

ಮಂಕಿ ಅಪಘಾತ: ಗಾಯಾಳು 8 ಮಂದಿಗೆ ಮಣಿಪಾಲದಲ್ಲಿ ಚಿಕಿತ್ಸೆ

Update: 2017-05-25 20:07 IST

ಮಣಿಪಾಲ, ಮೇ 25: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತವಾಡಿ ರಾ.ಹೆದ್ದಾರಿ 66ರಲ್ಲಿ ಇಂದು ಬೆಳಗಿನ ಜಾವ ಖಾಸಗಿ ಬಸ್ಸು ಹಾಗೂ ಧರ್ಮಸ್ಥಳಕ್ಕೆ ಹೋಗುತಿದ್ದ ಮದುವೆ ದಿಬ್ಬಣದ ಟೆಂಪೊ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿ ಪ್ರಯಾಣಿಕರು ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ರಸ್ತೆ ಅಪಘಾತದಲ್ಲಿ ಮದುವೆ ಯಾಗಲಿದ್ದ ಯುವತಿ ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಎಂಟು ಮಂದಿಯನ್ನು ಇಂದು ಮುಂಜಾನೆ 4:00 ಗಂಟೆ ಸುಮಾರಿಗೆ ಮಣಿಪಾಲ ಕೆಎಂಸಿಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು. ಗಾಯಾಳುಗಳು 14ರಿಂದ 65 ವರ್ಷ ವಯಸ್ಸಿನವರಾಗಿದ್ದು, ಇವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.(ಕರ್ನಲ್) ಎಂ.ದಯಾನಂದ ತಿಳಿಸಿದ್ದಾರೆ.

 ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಮೂವರು ಅಪಾಯದಿಂದ ಪಾರಾಗಿದ್ದು, ಮೂಳೆ ಮುರಿತಕ್ಕಾಗಿ ವೈದ್ಯಕೀಯ ಚಿಕಿತ್ಸೆಯಲ್ಲಿದ್ದಾರೆ. ಸಣ್ಣಪುಟ್ಟ ಗಾಯ ಹೊಂದಿದ ಒಬ್ಬರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸಂಜೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದವರು ವಿವರಿಸಿದ್ದಾರೆ.

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ನಾಲ್ವರನ್ನು ತಕ್ಷಣ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿ ಕಣ್ಗಾವಲಿನಲ್ಲಿರಿಸಲಾಗಿದೆ. ಇವರನ್ನು ಹರೀಶ್ ಎನ್. ಶೇಟ್ (24), ರಾಜೇಶ್ (25), ಸುನೀತಾ (45) ಮತ್ತು ಸುಮಿತ್ರಾ(65) ಎಂದು ಗುರುತಿಸಲಾಗಿದೆ. ಪ್ರಶಾಂತ್ (23) ಹಾಗೂ ಚೈತ್ರ (18) ಇವರಿಗೆ ಬಹು ಮೂಳೆ ಮುರಿತಗಳಾಗಿದ್ದು ಮೂಳೆ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ. 42 ವರ್ಷ ಪ್ರಾಯದ ಗೀತಾ ಎಂಬವರಿಗೆ ಮೂಗಿನ ಮೂಳೆ ಮುರಿತವಾಗಿದ್ದು ಕಿವಿ, ಗಂಟಲು ಮತ್ತು ಮೂಗಿನ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಡಾ. ದಯಾನಂದ್ ತಿಳಿಸಿದ್ದಾರೆ.

ಕುಂದಾಪುರಕ್ಕೆ ಐಜಿಪಿ ಭೇಟಿ:ಘಟನೆಯಲ್ಲಿ ಗಾಯಗೊಂಡ ಸುಮಾರು 24 ಮಂದಿಯಲ್ಲಿ 10ಕ್ಕೂ ಅಧಿಕ ಮಂದಿಯನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಳುಗಳು ಭಟ್ಕಳ ಮತ್ತು ಮುರ್ಡೇಶ್ವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಕೆಲವರನ್ನು ಈರಣ್ಣ (35), ಗೋರಪ್ಪ (29), ಸುಮಿತ್ರ (15), ಕವಿತಾ (25), ಬಾಬು ಗಣಪತಿ (22), ವೆಂಕಟೇಶ (48) ಹಾಗೂ ವಿಜಯಾ (4) ಎಂದು ಗುರುತಿಸಲಾಗಿದೆ.

ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರದಿಂದ ಕಾರವಾರ ದವರೆಗೆ ನಡೆದಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಜನರಿಗೆ ಕಾಣಿಸುವಂತೆ ಮಾರ್ಗದ ಅಲ್ಲಲ್ಲಿ ಸೂಚನಾಫಲಕಗಳನ್ನು ಅಳವಡಿಸುವಂತೆ ತಿಳಿಸಿದ್ದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News