ಪಾಕ್‌ಗೆ ನೀಡುವ ನೆರವಿನಲ್ಲಿ 100 ಮಿ. ಡಾ. ಕಡಿತಕ್ಕೆ ಅಮೆರಿಕ ಚಿಂತನೆ
ವಾಶಿಂಗ್ಟನ್, ಮೇ 25: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನೀಡಿರುವ ಸೇನಾ ಬೆಂಬಲಕ್ಕಾಗಿ ಅದಕ್ಕೆ ನೀಡುವ ನೆರವಿನಲ್ಲಿ 100 ಮಿಲಿಯ ಡಾಲರ್ (ಸುಮಾರು 646 ಕೋಟಿ ರೂಪಾಯಿ) ಕಡಿತ ಮಾಡಿ 800 ಮಿಲಿಯ ಡಾಲರ್ (5164 ಕೋಟಿ ರೂಪಾಯಿ) ನೀಡಲು ಅಮೆರಿಕದ ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮಿತ್ರದೇಶ ಬೆಂಬಲ ನಿಧಿ (ಸಿಎಸ್‌ಎಫ್)ಯಡಿ ಪಾಕಿಸ್ತಾನಕ್ಕೆ ನೀಡುವ ವಾರ್ಷಿಕ ಬಜೆಟ್ ನೆರವಿನಲ್ಲಿ 100 ಮಿಲಿಯ ಡಾಲರ್ ಕಡಿತ ಮಾಡಲು ಆಡಳಿತ ಉದ್ದೇಶಿಸಿದೆ.
ಸಿಎಸ್‌ಎಫ್ ಎನ್ನುವುದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ಕಾರ್ಯಕ್ರಮವಾಗಿದೆ. ಇದರನ್ವಯ ಅಮೆರಿಕದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ನೆರವು ನೀಡುವ ಮಿತ್ರ ದೇಶಗಳಿಗೆ ತಗಲುವ ಖರ್ಚನ್ನು ಅಮೆರಿಕ ಮರುಪಾವತಿಸುತ್ತದೆ.
ಅಮೆರಿಕದ ಈ ಕಾರ್ಯಕ್ರಮದಡಿ ಅತ್ಯಂತ ಹೆಚ್ಚು ಪ್ರಯೋಜನ ಪಡೆದ ದೇಶ ಪಾಕಿಸ್ತಾನವಾಗಿದೆ. ಅದು 2002ರಿಂದ 14 ಬಿಲಿಯ ಡಾಲರ್ (90,377 ಕೋಟಿ ರೂಪಾಯಿ) ಮೊತ್ತವನ್ನು ಪಡೆದುಕೊಂಡಿದೆ. ಆದರೆ, ಕಳೆದ ಎರಡು ವರ್ಷಗಳಿಂದ ನಿಧಿ ವರ್ಗಾವಣೆಗೆ ಅಮೆರಿಕದ ಕಾಂಗ್ರೆಸ್ ಶರತ್ತುಗಳನ್ನು ವಿಧಿಸಿದೆ.
2016ರ ಹಣಕಾಸು ವರ್ಷದಲ್ಲಿ ಪಾಕಿಸ್ತಾನ 900 ಮಿಲಿಯ ಡಾಲರ್ (5810 ಕೋಟಿ ರೂಪಾಯಿ) ಪಡೆದುಕೊಂಡಿತ್ತು.