ಸಚಿವರ ವಿರುದ್ಧ ಜಿಲ್ಲಾಡಳಿತಕ್ಕೆ ಆರೋಪಗಳ ಪಟ್ಟಿ ಸಲ್ಲಿಕೆ: ಮಟ್ಟಾರು
ಉಡುಪಿ, ಮೇ 25: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಷ್ಟಾಚಾರದ ಉಲ್ಲಂಘನೆ, ಕುಡಿಯುವ ನೀರಿನ ಸರಬರಾಜಿನಲ್ಲಿ ರಾಜಕೀಯ, ಮರಳು ಮಾಫಿಯಾದೊಂದಿಗೆ ಹಸ್ತಕ್ಷೇಪ, ಕೇಂದ್ರದ ಅನುದಾನಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದು, ಇವರ ವಿರುದ್ಧ ಜಿಲ್ಲಾಡಳಿತಕ್ಕೆ ಆರೋಪಗಳ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಉಡುಪಿ ಜಿಪಂ, ತಾಪಂಗಳಲ್ಲಿ ಬಿಜೆಪಿ ಆಡಳಿತಾರೂಢ ಪಕ್ಷವಾಗಿದ್ದು, ಇದನ್ನು ಸಹಿಸದ ಸಚಿವರು ಸ್ಥಳೀಯ ಆಡಳಿತದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದಾರೆ. ಜಿಪಂಗೆ ಸಂಬಂಧಿ ಸಿದ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷರನ್ನು ಕಡೆಗಣಿಸಿ, ಅವರನ್ನು ದಲಿತರೆಂಬ ಕಾರಣಕ್ಕೆ ಅವಮಾನಿಸು ತ್ತಿದ್ದಾರೆ ಎಂದು ಟೀಕಿಸಿದರು.
ಕುಡಿಯುವ ನೀರಿನ ಸರಬರಾಜಿಗೆ ಕೇಂದ್ರ ಸರಕಾರ ವಿಶೇಷ ಕಾರ್ಯಪಡೆ ಯನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ. ಆದರೆ ಉಡುಪಿ ಶಾಸಕರು ನೀರು ಸರಬರಾಜು ಟ್ಯಾಂಕರಿಗೆ ತನ್ನ ಭಾವಚಿತ್ರದ ಬ್ಯಾನರ್‌ಗಳನ್ನು ಹಾಕಿಕೊಂಡು ತನ್ನ ಸ್ವಂತ ಖರ್ಚಿನಿಂದ ನೀರು ಕೊಡುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇನ್ನು ಇದೇ ರೀತಿ ಮುಂದುವರೆದರೆ ಟ್ಯಾಂಕರ್‌ಗಳಲ್ಲಿರುವ ಬ್ಯಾನರ್‌ಗಳನ್ನು ತೆಗೆ ಯುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕೇಂದ್ರ ಸರಕಾರದ ನಿಧಿ ಹಾಗೂ ಅನುದಾನದಿಂದ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿದ್ದು, ಸಚಿವರು ಅದೆಲ್ಲವೂ ರಾಜ್ಯ ಸರಕಾರದ ಯೋಜನೆ ಎಂಬಂತೆ ಬಿಂಬಿಸಿ ಕೇಂದ್ರ ಸರಕಾರವನ್ನು ಕಡೆಗಣಿಸುತ್ತಿ ದ್ದಾರೆ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಈಗಲೂ ಕೂಡ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಬಜೆ ಅಣೆಕಟ್ಟಿನ ಸ್ವರ್ಣ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ವಿಪರೀತ ಮರಳು ತುಂಬಿದ್ದು, ಇದರ ಹೂಳೆತ್ತಲು ನಗರಸಭೆ ಅವೈಜ್ಞಾನಿಕ ವಾಗಿ ಟೆಂಡರ್ ಕರೆದಿದೆ. ಆದರೆ ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಈ ಹೂಳೆತ್ತುವ ಕಾರ್ಯಕ್ರಮದ ಹಿಂದೆ ಬಹುದೊಡ್ಡ ಮರಳು ಮಾಫಿಯಾದ ಕೈವಾಡ ಇರುವುದು ತಿಳಿದುಬಂದಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇರ ಹಸ್ತಕ್ಷೇಪ ಇದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಕುಯಿಲಾಡಿ ಸುರೇಶ್ ನಾಯಕ್, ಕಟ ಪಾಡಿ ಶಂಕರ ಪೂಜಾರಿ, ಪ್ರಭಾಕರ ಪೂಜಾರಿ, ಶ್ರೀಶ ನಾಯಕ್ ಮೊದಲಾದ ವರು ಉಪಸ್ಥಿತರಿದ್ದರು.