ಏಡ್ಸ್, ಮಲೇರಿಯಾಗಿಂತ ಪದಾಧಿಕಾರಿಗಳ ಪ್ರಯಾಣಕ್ಕೆ ಹೆಚ್ಚು ದುಡ್ಡು ಖರ್ಚು ಮಾಡುತ್ತಿದೆ ವಿಶ್ವ ಅರೋಗ್ಯ ಸಂಸ್ಥೆ !

Update: 2017-05-25 15:50 GMT

ನ್ಯೂಯಾರ್ಕ್, ಮೇ 24: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಮಹಾನಿರ್ದೇಶಕಿ ಡಾ. ಮಾರ್ಗರೆಟ್ ಚಾನ್ ದುಂದುವೆಚ್ಚಕ್ಕಾಗಿ ಸುದ್ದಿಯಲ್ಲಿದ್ದಾರೆ.

ಜಗತ್ತಿನ ಮೊದಲ ಎಬೋಲಾ ಲಸಿಕೆಯ ಯಶಸ್ಸನ್ನು ಆಚರಿಸಲು ಈ ತಿಂಗಳ ಆದಿ ಭಾಗದಲ್ಲಿ ಅವರು ಗಿನಿ ದೇಶಕ್ಕೆ ಭೇಟಿ ನೀಡಿದ್ದರು. ಮಾರಕ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿರುವುದಕ್ಕಾಗಿ ಪಶ್ಚಿಮ ಆಫ್ರಿಕದ ಆರೋಗ್ಯ ಕಾರ್ಯಕರ್ತರನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಆ ರಾತ್ರಿ ಅವರು ಸಮುದ್ರ ತೀರದಲ್ಲಿರುವ ಪಾಮ್ ಕ್ಯಾಮಯೆನ್ ಹೊಟೇಲ್‌ನ ಅತ್ಯುನ್ನತ ಶ್ರೇಣಿಯ ವೈಭವೋಪೇತ ಕೋಣೆಯಲ್ಲಿ ತಂಗಿದರು. ಆ ಕೋಣೆಯ ಒಂದು ರಾತ್ರಿಯ ದರ 1,008 ಡಾಲರ್ (ಸುಮಾರು 65,000 ರೂಪಾಯಿ).

ಇಂಥ ವೈಭವೋಪೇತ ಕೋಣೆಯಲ್ಲಿನ ವಾಸ ಅವರ ಸಂಘಟನೆಯ 7,000 ಸಿಬ್ಬಂದಿಗೆ ತಪ್ಪು ಸಂದೇಶ ಕಳುಹಿಸುತ್ತದೆ ಎಂದು ಕೆಲವರು ಹೇಳುತ್ತಾರೆ.

‘ಅಸೋಸಿಯೇಟಡ್ ಪ್ರೆಸ್’ ಸಂಗ್ರಹಿಸಿದ ಆಂತರಿಕ ದಾಖಲೆಗಳ ಪ್ರಕಾರ, ವಿಶ್ವಸಂಸ್ಥೆಯ ಆರೋಗ್ಯ ಇಲಾಖೆಯು ನಿಯಮಿತವಾಗಿ ಪ್ರತಿ ವರ್ಷ ಸುಮಾರು 200 ಮಿಲಿಯ ಡಾಲರ್ (1291 ಕೋಟಿ ರೂಪಾಯಿ) ಮೊತ್ತವನ್ನು ಪ್ರಯಾಣಕ್ಕಾಗಿ ಖರ್ಚು ಮಾಡುತ್ತಿದೆ. ಇದು ಏಡ್ಸ್, ಕ್ಷಯ ಮತ್ತು ಮಲೇರಿಯ ಮುಂತಾದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಮಾಡುವ ಒಟ್ಟು ಖರ್ಚಿಗಿಂತ ಅಧಿಕವಾಗಿದೆ.

ಕಳೆದ ವರ್ಷ ಆರೋಗ್ಯ ಸಂಸ್ಥೆಯು ಏಡ್ಸ್ ಮತ್ತು ಹೆಪಾಟೈಟಿಸ್‌ಗಳ ನಿಯಂತ್ರಣಕ್ಕೆ 71 ಮಿಲಿಯ ಡಾಲರ್ (ಸುಮಾರು 458 ಕೋಟಿ ರೂ.) ಖರ್ಚು ಮಾಡಿದೆ. ಮಲೇರಿಯಕ್ಕೆ ಅದು 61 ಮಿಲಿಯ ಡಾಲರ್ (394 ಕೋಟಿ ರೂ.) ಮೀಸಲಿಟ್ಟಿತು. ಕ್ಷಯ ರೋಗದ ಹರಡುವಿಕೆಯನ್ನು ತಗ್ಗಿಸಲು ಅದು 59 ಮಿಲಿಯ ಡಾಲರ್ (380 ಕೋಟಿ ರೂ.) ನೀಡಿದೆ.

ಆದಾಗ್ಯೂ, ಪೋಲಿಯೊವನ್ನು ಮೂಲೋತ್ಪಾಟನೆ ಮಾಡುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ 450 ಮಿಲಿಯ ಡಾಲರ್ (2905 ಕೋಟಿ ರೂ.) ವೆಚ್ಚ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News