ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನಿಲ್ಲಿಸಲು ಸರಕಾರಿ ಆದೇಶದ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ
ಮಂಗಳೂರು, ಮೇ 25: ಖಾಸಗಿ ಶಿಕ್ಷಣ ಸಂಸ್ಥಗಳು ಪೋಷಕರಿಂದ ಸುಲಿಗೆ ಮಾಡಲು ಪ್ರೋತ್ಸಾಹ ನೀಡುವುದಕ್ಕಾಗಿ ಜಿಲ್ಲಾಡಳಿತ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಕಲಿಕೆಗೆ ತಡೆ ನೀಡುತ್ತಿದೆ ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಅವರು ಇಂದು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದನ್ನು ನಿಲ್ಲಿಸಲು ಆದೇಶ ನೀಡಿದ ಸರಕಾರದ ನೀತಿಯನ್ನು ಖಂಡಿಸಿ ಮಂಗಳೂರಿನ ಕಸಬ ಬೆಂಗರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳಲ್ಲಿ ಕನ್ನಡ ಕಲಿಕೆ ಅನಿವಾರ್ಯವೂ, ಕಡ್ಡಾಯವೂ ಆಗಬಾರದು. ಕಲಿಕಾ ಮಾಧ್ಯಮ ಆಯ್ಕೆಯ ವಿಷಯವಾಗಬೇಕು ಎಂದ ಅವರು, ಸರಕಾರಿ ಶಾಲೆಯನ್ನು ಬಲಪಡಿಸಬೇಕೇ ಹೊರತು ದುರ್ಬಲಗೊಳಿಸಲು ಬಿಡುವುದಿಲ್ಲ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಜಿಲ್ಲಾಡಳಿತ ಮಾದರಿಯಾಗಿ ಸ್ವೀಕರಿಸಬೇಕಾಗಿದ್ದ ಸರಕಾರಿ ಶಾಲೆಯೊಂದು ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿರುವುದು ವಿಪರ್ಯಾಸ. ಬೆಂಗರೆ ಕಸಬದ ಸರಕಾರಿ ಶಾಲೆಯ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಿರುವುದರಿಂದಾಗಿ ಎಲ್.ಕೆ.ಜಿ ಯಿಂದ ಎರಡನೆ ತರಗತಿ ವರೆಗೆ 360 ಮಂದಿ ಬಡವರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ ಶಾಲೆಗೆ ಬರುವ ಅನುದಾನವನ್ನು ಬಳಸಿಕೊಂಡು, ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವ ಆಂಗ್ಲ ಮಾಧ್ಯಮ ಶಾಲೆ ಮುಚ್ಚುವ ಅಗತ್ಯತೆಯನ್ನು ಅವರು ಪ್ರಶ್ನಿಸಿದರು.
ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗದ ಜಿಲ್ಲಾಧಿಕಾರಿಗಳು ಎಸ್‌ಡಿಎಂಸಿ ಸದಸ್ಯರ ವಿರುದ್ಧ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳ ಹೇಳಿಕೆ ಇದೇ ಸಂದರ್ಭದಲ್ಲಿ ಟೀಕಿಸಿದರು. ಆಂಗ್ಲ ಮಾಧ್ಯಮ ಶಿಕ್ಷಣವನ್ನು ನಿಲ್ಲಿಸಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಚ್ಚರಿಕೆ ನೀಡಿದರು.
ಕಸಬ ಬೆಂಗರೆ ಜಮಾತ್ ಅಧ್ಯಕ್ಷ ಅಬ್ದುಲ್ ಹಮೀದ್, ಸಮಾಜ ಸೇವಕಿ ಶಮೀಮ್ ತಣ್ಣೀರುಬಾವಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಖೈರುನ್ನಿಸಾ, ಬೆಂಗರೆ ಡಿವೈಎಫ್‌ಐ ಅಧ್ಯಕ್ಷ ಎ.ಬಿ.ನೌಷಾದ್, ಕಾರ್ಯದರ್ಶಿ ರಿಯಾಝ್ ಬೆಂಗರೆ, ನಾಸಿರ್ ಬಾಸ್, ನೌಷಾದ್, ಪಿ.ಜಿ.ರಫೀಕ್, ಅಬ್ದುಲ್ ವಹಾಬ್ ಅಶ್ರಫ್ ಅಸ್ಸು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.