×
Ad

ಮಾನವೀಯ ಸೇವೆಯ ಮೂಲಕ ಮನೆಮಾತಾದ ಮಂಗಳೂರಿನ ಸುನಿಲ್

Update: 2017-05-25 22:48 IST

ಮಂಗಳೂರು, ಮೇ 25: ಕ್ಯಾಬ್ ಚಾಲಕರೋರ್ವರು ನಗರದಲ್ಲಿ ಸದ್ದಿಲ್ಲದೆ ನಡೆಸುತ್ತಿರುವ ನಿಸ್ವಾರ್ಥ ಸೇವೆಯ ಬಗ್ಗೆ ಯುವತಿಯೋರ್ವರು ಸಾಮಾಜಿ ಜಾಲತಾಣ ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

ಬಡರೋಗಿಗಳಿಗೆ ತನ್ನ ಕ್ಯಾಬ್ ನಲ್ಲಿ ಉಚಿತ ಪ್ರಯಾಣದ ಸೇವೆ ಕಲ್ಪಿಸುತ್ತಿದ್ದ ವಾಮಂಜೂರು ಸಮೀಪದ ಮೂಡುಶೆಡ್ಡೆಯ ನಿವಾಸಿ ಸುನಿಲ್‌ ಕೆ. ಇದೀಗ ಎಲ್ಲೆಡೆ ಮನೆಮಾತಾಗಿದ್ದಾರೆ. ಕಾವ್ಯಾ ರಾವ್ ಎಂಬವರು ಸುನೀಲ್ ರ ನಿಸ್ವಾರ್ಥ ಸೇವೆಯ ಬಗ್ಗೆ ವಿವರಿಸಿದ್ದಾರೆ.

ಕಾವ್ಯಾ ರಾವ್ ಅವರ ತಂದೆ ಅನಾರೋಗ್ಯದಿಂದಿದ್ದ ಕಾರಣ ಅವರನ್ನು ಆಸ್ಪತ್ರೆ ಕರೆದೊಯ್ಯುವ ಸಲುವಾಗಿ ಓಲಾ ಕ್ಯಾಬ್ ಕಾರನ್ನು ಬುಕ್ ಮಾಡಿದ್ದರು. ತಕ್ಷಣವೇ ಅಶೋಕನಗರದಲ್ಲಿರುವ ಕಾವ್ಯಾ ರಾವ್‌ ಮನೆಗೆ ಆಗಮಿಸಿದ ಸುನಿಲ್ ಕಾವ್ಯಾರ ತಂದೆಯನ್ನು ನಗರದ  ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಕಾರಿನ ಬಾಡಿಗೆ  140 ರೂ. ಆಗಿದ್ದು, ಅದನ್ನು ಕಾವ್ಯಾ ಅವರ ತಾಯಿ ಪಾವತಿಸಲು ಮುಂದಾಗಿದ್ದು, ಸುನಿಲ್ ಹಣ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಕಾವ್ಯಾರ ತಾಯಿ ಬಾಡಿಗೆ ಪಡೆದುಕೊಳ್ಳುವಂತೆ ಒತ್ತಾಯಿಸಿದಾಗಲೂ ಸುನಿಲ್ ಹಣ ಪಡೆದುಕೊಂಡಿಲ್ಲ. ಕೊನೆಗೆ ಬಾಡಿಗೆ ಏಕೆ ಪಡೆಯುವುದಿಲ್ಲ ಎಂದು ಪ್ರಶ್ನಿಸಿದಾಗ, "ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಾಡಿಗೆಯಾಗಿದ್ದರೆ ನಾನು ಹಣ ಪಡೆಯುವುದಿಲ್ಲ. ಉಚಿತ ಸೇವೆ ನೀಡುತ್ತೇನೆ"  ಎಂದು ಉತ್ತರಿಸಿದ್ದಾರೆ.

ಮನೆಗೆ ಬಂದ ಕಾವ್ಯಾರ ತಾಯಿ ಘಟನೆಯನ್ನು ಮಗಳ ಬಳಿ ವಿವರಿಸಿದ್ದು, ಕಾವ್ಯಾ ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಸುನಿಲ್ ರ ಸೇವೆಯ ಬಗ್ಗೆ ವಿವರಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳಿಂದ ಕ್ಯಾಬ್ ಡ್ರೈವರ್ ಗಳ ಮೇಲೆ ಇಂದಿನ ದಿನಗಳಲ್ಲಿ ಅನುಮಾನದ ದೃಷ್ಟಿಯಿರುವ ನಡುವೆ ಸುನಿಲ್ ರಂತಹವರು ಮಾದರಿಯಾಗಿದ್ದಾರೆ ಎಂದು ಕಾವ್ಯಾ ಬಣ್ಣಿಸಿದ್ದಾರೆ.

ಫೇಸ್ಬುಕ್ ಹೀರೋ: ಕಾವ್ಯಾರ ಪೋಸ್ಟ್ ಗೆ ಫೇಸ್ಬುಕ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸುನಿಲ್ ಬಗ್ಗೆ ವ್ಯಾಪಕ ಪ್ರಶಂಸೆಗಳು ಕೇಳಿಬರುತ್ತಿವೆ. ಈ ಪೋಸ್ಟ್ ಗೆ 66 ಸಾವಿರ ಲೈಕ್ ಗಳು ಸಿಕ್ಕಿದ್ದು, 5 ಸಾವಿರಕ್ಕಿಂತ ಹೆಚ್ಚು ಬಾರಿ ಈ ಪೋಸ್ಟ್ ಶೇರ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News