×
Ad

ಮಂಗಳೂರು : ಬಿಸಿಯೂಟ ನೌಕರರಿಂದ ಪ್ರತಿಭಟನೆ

Update: 2017-05-25 23:10 IST

ಮಂಗಳೂರು, ಮೇ 25: ಕೇಂದ್ರ ಸರಕಾರವು ಬಿಸಿಯೂಟ ಯೋಜನೆಗೆ ಕಡಿತ ಮಾಡಿರುವ ಅನುದಾನವನ್ನು ವಾಪಾಸ್ ನೀಡಬೇಕು, ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಬಾರದು ಹಾಗೂ ಶಿಕ್ಷಣ ಇಲಾಖೆಯಿಂದ ಶಿಫಾರಸು ಆಗಿರುವ ರೂ. 4000 ವೇತನ ಹೆಚ್ಚಳವನ್ನು ಕೂಡಲೇ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಬಿಸಿಯೂಟ ನೌಕರರ ರಾಜ್ಯಾದ್ಯಂತ ಹೋರಾಟದ ಭಾಗವಾಗಿ ಗುರುವಾರ ಮಂಗಳೂರಿನ ದ.ಕ. ಜಿಲ್ಲಾ ಪಂಚಾಯತ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

400ಕ್ಕೂ ಮಿಕ್ಕಿದ ಬಿಸಿಯೂಟ ನೌಕರರು ಉರ್ವಸ್ಟೋರು ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ಹೊರಟು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

 ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ನಿಜವಾದ ಉದ್ದೇಶವನ್ನು ಮರೆಮಾಚಿ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಯುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ಮಹಿಳೆಯರೇ ದುಡಿಯುತ್ತಿರುವ ಈ ಯೋಜನೆಯಲ್ಲಿ ಇಂದಿಗೂ ನಿಕೃಷ್ಟ ಕೂಲಿ ನೀಡುವ ಮೂಲಕ ವಿಪರೀತವಾಗಿ ಶೋಷಿಸಲಾಗುತ್ತಿದೆ. ಇವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಇಂತಹ ಬಿಸಿಯೂಟ ನೌಕರರು ಸಂಘಟಿತ ಶಕ್ತಿಯಾಗಿ ಹೋರಾಟ ನಡೆಸಬೇಕು ಎಂದರು.

ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಯಾದವ ಶೆಟ್ಟಿಯವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡಬಿದ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೋರಾಟದ ನೇತೃತ್ವವನ್ನು ಸಂಘದ ಮುಖಂಡರಾದ ಪದ್ಮಾವತಿ ಶೆಟ್ಟಿ, ಭವ್ಯಾ, ಗಿರಿಜಾ ಮೂಡಬಿದ್ರೆ, ರೇಖಲತಾ, ಬಬಿತಾ, ಮೋನಮ್ಮ, ಶಾಲಿನಿ, ಮಾಲತಿ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News