ಕಲ್ಲಡ್ಕ: ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಯುವಕನಿಗೆ ಚೂರಿ ಇರಿತ
ಬಂಟ್ವಾಳ, ಮೇ 26: ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಯುವಕನೋರ್ವನಿಗೆ ಕಾರಿನಲ್ಲಿ ಬಂದ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕ ನಿವಾಸಿ ಯೂಸುಫ್ ಎಂಬವರ ಪುತ್ರ ಮುಹಮ್ಮದ್ ಹಾಶಿರ್ ಚೂರಿ ಇರಿತದಿಂದ ಗಾಯಗೊಂಡ ಯುವಕ. ಕಲ್ಲಡ್ಕದ ಮಿಥುನ್ ಹಾಗೂ ಆತನ ತಂಡ ಈ ಕೃತ್ಯ ಎಸಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಹಮ್ಮದ್ ಹಾಶಿರ್ ಜುಮಾ ನಮಾಝ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮಿಥುನ್ ಮತ್ತು ತಂಡ ಚೂರಿಯಿಂದ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದೆ ಎನ್ನಲಾಗಿದೆ. ಘಟನೆಯಿಂದ ಯುವಕನ ಬೆನ್ನಿಗೆ ಗಾಯವಾಗಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಜೀಪ ಮುನ್ನೂರಿನ ಹರೀಶ್ ಗೌಡ ಎಂಬವರ ಕೊಲೆಯತ್ನ ಹಾಗೂ ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಿಥುನ್ ಹಾಗೂ ಆತನ ತಂಡ ಮೊನ್ನೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿತ್ತು.
ಚೂರಿ ಇರಿತ ಸುದ್ದಿ ಹರಡುತ್ತಿದತೆ ಸ್ಥಳದಲ್ಲಿ ಜನರು ಜಮಾಯಿಸತೊಡಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಹಾಗೂ ಅವರ ಸಿಬ್ಬಂದಿ ದೌಡಾಯಿಸಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಗಾಯಾಳುವಿಗೆ ಚಿಕಿತ್ಸೆ ನೀಡುತ್ತಿರುವ ತುಂಬೆ ಖಾಸಗಿ ಆಸ್ಪತ್ರೆಯ ಎದುರು ಕೂಡಾ ಜನ ಜಮಾಯಿಸತೊಡಗಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ