ನೇಣು ಬಿಗಿದು ಯುವತಿ ಆತ್ಮಹತ್ಯೆ: ದೂರು
ಕಾಸರಗೋಡು, ಮೇ 26: ವಿವಾಹ ನಿಶ್ಚಯವಾಗಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾರಡ್ಕದಲ್ಲಿ ನಡೆದಿದೆ.
ಕಾರಡ್ಕ ಅಯರ್ಕೋಡ್ ಶಾಲಾ ಬಳಿಯ ಅನಿಶ್ ಎಂಬವರ ಪುತ್ರಿ ಆಯನಾ ( 19) ಮೃತರು ಎಂದು ಗುರುತಿಸಲಾಗಿದೆ.
ಈಕೆ ಕಾಸರಗೋಡು ಖಾಸಗಿ ಕಾಲೇಜೊಂದರಲ್ಲಿ ಪದವಿ ಶಿಕ್ಷಣ ವಿದ್ಯಾರ್ಥಿನಿಯಾಗಿದ್ದರು. ಕಾರಡ್ಕ ಸರಕಾರಿ ಶಾಲಾ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈಕೆ ಈ ಹಿಂದೆ ವಾಸವಾಗಿದ್ದ ಅಯರ್ಕೋಡ್ ಬಾಡಿಗೆ ಮನೆಯಲ್ಲಿ ಉಳಿದಿದ್ದ ವಸ್ತ್ರವನ್ನು ತರುವುದಾಗಿ ಹೇಳಿ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದಾಗ ಅಯರ್ಕೋಡ್ ಹಳೆ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಈ ಮನೆಯಿಂದ ಕಾರಡ್ಕ ಸರಕಾರಿ ಶಾಲೆ ಬಳಿಯ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.ಈಕೆಗೆ ಮೂರು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.