ಮೇ 27: ಸರ್ಫಿಂಗ್ ಸ್ಪರ್ಧೆ ಸೆಮಿಫೈನಲ್

Update: 2017-05-26 14:00 GMT

ಮಂಗಳೂರು, ಮೇ 26: ಸಸಿಹಿತ್ಲು ಕಡಲ ತೀರದಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯಲ್ಲಿ ಮೊದಲ ದಿನದಲ್ಲಿ ಮಹಿಳೆಯರಿಗಾಗಿ ಸ್ಟಾಂಡ್ ಅಪ್ ಪೆಡಲಿಂಗ್ ಸೇರಿದಂತೆ ಸ್ಪರ್ಧೆ ನಡೆದಿದ್ದು, ವಿವಿಧ ವಿಭಾಗಗಳಲ್ಲಿ ಇಂದು ಆಯ್ಕೆಗೊಂಡವರು ಮೇ 27 ಸೆಮಿ ಫೈನಲ್‌ನಲ್ಲಿ ಹಣಾಹಣಿ ನಡೆಸಲಿದ್ದಾರೆ.

14 ವರ್ಷದೊಳಗಿನ, 16 ವರ್ಷದೊಳಗಿನ, ಹಿರಿಯ (23 ವರ್ಷದಿಂದ 30 ವರ್ಷ), ಮಾಸ್ಟರ್ಸ್ (30 ವರ್ಷ ಮತ್ತು ಮೇಲ್ಪಟ್ಟವರು) ಮತ್ತು ಮುಕ್ತ ವಿಭಾಗದಲ್ಲಿ ಇಂದು ಸ್ಪರ್ಧೆ ನಡೆಯಿತು. ಅಂತಿಮ ಸ್ಪರ್ಧೆ ಮೇ 28ರಂದು ನಡೆಯಲಿದೆ.

ವಿವಿಧ ವಿಭಾಗಗಳಲ್ಲಿ ಸ್ಪರ್ಧಿಗಳಿಗೆ ಒಟ್ಟು 15 ನಿಮಿಷಗಳಲ್ಲಿ ಕಡಲಿನ ಅಲೆಗಳಲ್ಲಿ ತಮ್ಮ ಸಾಹಸ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಅವರು 10 ಅಲೆಗಳಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸಬೇಕಾಗಿತ್ತು. ಅಲೆಗಳ ಜತೆ ಸ್ಪರ್ಧಿಗಳ ಸೆಣಸಾಟದ ಚಾಕಚಕ್ಯತೆಯ ಮೇರೆಗೆ ತೀರ್ಪುಗಾರರು ಮುಂದಿನ ಹಂತಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡರು.

ಆರಂಭದಲ್ಲಿ ಮಾಸ್ಟರ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಇದರಲ್ಲಿ 9 ಮಂದಿ ಭಾಗವಹಿಸಿದ್ದರು. ಅವರಲ್ಲಿ ಮೂರ್ತಿ ಮೇಗವನ್, ಸಂದೀಪ್ ಸ್ಯಾಮುವೆಲ್, ಮುಕೇಶ್ ಪಂಜನಾಥನ್, ವೆಂಕಟೇಸನ್ ಎ., ವೇಲ್‌ಮುರುಗನ್, ವೆಂಗಟ್ ಕೆ. ಸೆಮಿಫೈನಲ್ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯರ ವಿಭಾಗದಲ್ಲಿ 26 ಸರ್ಫರ್‌ಗಳು ಭಾಗವಹಿಸಿದ್ದರು. ಅವರಲ್ಲಿ ಮಣಿಕಂಡನ್ ಅಪ್ಪು, ವಿಗ್ನೇಶ್ ವಿಜಯ ಕುಮಾರ್, ರಾಹುಲ್ ಪನ್ನೀರ್‌ಸೆಲ್ವಂ, ಧರಣಿ ಸೆಲ್ವಕುಮಾರ್, ರಾಜಾ ಬೇಕರ್, ಜಯರಾಜ್ ಪೆಂಗಲ್, ಸ್ವಪ್ನಿ ಭಿಂಗೆ, ಶ್ರೀಕೃಷ್ಣ ವಸಂತ, ಸೇಕರ್ ಪಟಚೆ, ದೀಕ್ಷಿತ್ ಸುವರ್ಣ, ಸತೀಶ್ ಪಾಂಡಿಯನ್, ಸಂತೋಷ್ ಮೂರ್ತಿ, ಧರ್ಮರಾಜ್ ಸೇಕರ್, ನಿಸಾಮ್ ಸುಲೇಮಾನ್, ವರ್ಗೀಸ್ ಆ್ಯಂಟನಿ ಸೇರಿ 15 ಮಂದಿ ದ್ವಿತೀಯ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮುಕ್ತ ವಿಭಾಗದಲ್ಲಿ ಫ್ರಾನ್ಸ್, ಮಾಲ್ಡೀವ್ಸ್, ಮಡಗಾಸ್‌ಕರ್ ಮತ್ತು ಭಾರತ ಸೇರಿದಂತೆ 13 ಸರ್ಫರ್‌ಗಳು ಭಾಗವಹಿಸಿದ್ದರು. ಫ್ರಾನ್ಸ್‌ನ ಪೆರ್ಸೆವಲ್ ಫಯಾನ್, ಮಾಲ್ಡೀವ್ಸ್‌ನ ಇಸ್ಮಾಯಿಲ್, ಮಡಗಾಸ್‌ಕರ್‌ನ ಮನಪೂರ್ಬ ಮ್ಯಾಕ್ಸಿಮ್, ಭಾರತದ ಧರಣಿ ಸೆಲ್ವಕುಮಾರ್, ಮಣಿಕಂಡನ್ ಅಪ್ಪು, ರಾಹುಲ್ ಗೋವಿಂದ್, ಸೇಕರ್ ಪಟಚೆ, ಮಾಲ್ಡೀವ್ಸ್‌ನ ಅಮ್ಮಾಡೆ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

14 ವರ್ಷದೊಳಗಿನ ಮತ್ತು 16 ವಷದೊಳಗಿನ ವಿಭಾಗದಲ್ಲಿ 24 ಮಂದಿ ಭಾಗವಹಿಸಿದ್ದು ಅವರಲ್ಲಿ ತಾಯನ್ ಅರುಣ್, ಚಾಂದ್, ಸುಬ್ರಮಣಿ ಮುನಿಯನ್, ಸೆಲ್ವಾ ಮುನಿಯನ್, ಮಂಜು, ಸುರ್ಬಿ ಕೃಷ್ಣನ್, ಅಖಿಲನ್, ಓಂಕಾರ್ ಭಟ್, ಶ್ರೀಕಾಂತ್, ಅಬ್ದುಲ್ ರಝಾಕ್ ಜಮಾಲದ್ದೀನ್, ದೀಕ್ಷಿತ್ ಭಾಸ್ಕರ್ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.

ತನ್ವಿ ಜಗದೀಶ್ ಚಾಂಪಿಯನ್!
ಮಹಿಳೆಯರಿಗಾಗಿ ನಡೆದ ಸ್ಟಾಂಡ್ ಅಪ್ ಪೆಡಲಿಂಗ್ ಸ್ಪರ್ಧೆಯಲ್ಲಿ ಆರು ಮಂದಿ ಯುವತಿಯರು ಭಾಗವಹಿಸಿದ್ದರು. ಅವರಲ್ಲಿ ಭಾರತದ ಖ್ಯಾತ ಸ್ಟಾಂಡ್ ಅಪ್ ಪೆಡಲರ್ ಮತ್ತು ಸ್ಥಳೀಯರಾದ ತನ್ವಿ ಜಗದೀಶ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹರ್ಷಿತಾ ಆಚಾರ್ ದ್ವಿತೀಯ ಸ್ಥಾನಿಯಾಗಿ ಹಾಗೂ ವಿಲಾಸಿನಿ ಸುಂದರ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News