ಸ್ವಚ್ಛ ಗ್ರಾಮ ಯೋಜನೆ ದ.ಕ.-ಉಡುಪಿ ಜಿಲ್ಲೆಗೆ ವಿಸ್ತರಣೆ
ಮಂಗಳೂರು, ಮೇ 26: ಕಳೆದ ಎರಡು ವರ್ಷಗಳಿಂದ ರಾಮಕೃಷ್ಣ ಮಿಷನ್ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನವನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ‘ಸ್ವಚ್ಛ ಗ್ರಾಮ’ ವಿಚಾರ ಸಂಕಿರಣವು ಮೇ 28ರಂದು ಮಂಗಳಾದೇವಿಯಲ್ಲಿರುವ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ ಎಂದು ರಾಮಕೃಷ್ಣ ಮಠದ ಮುಖ್ಯಸ್ಥ ಜಿತಕಾಮಾನಂದ ಸ್ವಾಮಿಜಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
‘ಸ್ವಚ್ಛ ಮಂಗಳೂರು: ಒಂದು ಪ್ರಯೋಗ’, ‘ಸ್ವಚ್ಛ ಮನಸ್ಸು: ಸ್ವಚ್ಛ ಭಾರತ’, ‘ಸ್ವಚ್ಛ ಗ್ರಾಮ ಕಲ್ಪನೆ’ ಮತ್ತು ‘ಸ್ವಚ್ಛತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ವಿಷಯದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ ಎಂದರು.
ಸ್ವಚ್ಛ ಮಂಗಳೂರು ಸಂಚಾಲಕ ಸ್ವಾಮಿ ಏಕಗಮ್ಯಾನಂದ ಮಾತನಾಡಿ, ಪ್ರಸ್ತುತ ಮೂರನೆ ಹಂತದ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಂತದಲ್ಲಿ 400 ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಲಾಗಿತ್ತು. ಇದೀಗ 390 ಕಾರ್ಯಕ್ರಮ ಪೂರ್ಣಗೊಂಡಿದೆ. ಮೇ 28ರಂದು 400ರ ಗಡಿ ದಾಟಲಿದೆ. ಜೂ. 11ರಂದು ಮೂರನೇ ಹಂತದ ಅಭಿಯಾನದ ಸಮಾರೋಪ ನಡೆಯಲಿದೆ ಎಂದು ಹೇಳಿದರು.
ಅಕ್ಯುಪ್ರೆಶ್ಶರ್ ವಾಕಿಂಗ್ ಟ್ರಾಕ್
ಕರಂಗಲ್ಪಾಡಿಯ ಪವನ್ ಅಪಾರ್ಟ್‌ಮೆಂಟ್ ಮುಂಭಾಗದ ಉದ್ಯಾನವೊಂದು ಕಳೆದ ಹಲವು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಸ್ಥಳೀಯರ ಕೋರಿಕೆ ಹಿನ್ನೆಲೆಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಅದನ್ನು ಪುನ:ನಿರ್ಮಾಣ ಕಾರ್ಯ ಸಾಗಿದೆ. ಸುಮಾರು 200 ಅಡಿ ಉದ್ದ, 8 ಅಡಿ ಅಗಲದ ಅಕ್ಯುಪ್ರೆಶ್ಶರ್ ವಾಕಿಂಗ್ ಟ್ರಾಕ್ ನಿರ್ಮಿಸಲಾಗಿದೆ. ಅಲ್ಲದೆ ಗಿಡ ನೆಟ್ಟು, ಕಾರಂಜಿ ನಿರ್ಮಾಣ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೂ. 11ರಂದು ಲೋಕಾರ್ಪಣೆ ಮಾಡುವ ಸಂಬಂಧ ಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಕಾರ್ಪೋರೇಟರ್ ಪ್ರಕಾಶ್ ಸಾಲ್ಯಾನ್, ಸ್ವಚ್ಛ ಮಂಗಳೂರು ಅಭಿಯಾನದ ಉಮಾನಾಥ್ ಕೋಟೆಕಾರ್, ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.