ಟ್ರಂಪ್ ಅಳಿಯನನ್ನು ಪ್ರಶ್ನಿಸಲಿರುವ ಎಫ್‌ಬಿಐ

Update: 2017-05-26 14:28 GMT

 ವಾಶಿಂಗ್ಟನ್, ಮೇ 26: 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪ್ರಚಾರ ತಂಡ ಮತ್ತು ರಶ್ಯದ ನಡುವಿನ ಸಂಬಂಧಗಳ ಬಗ್ಗೆ ತನಿಖೆ ನಡೆಸುತ್ತಿರುವ ಎಫ್‌ಬಿಐ ತನಿಖಾಧಿಕಾರಿಗಳೊಂದಿಗೆ ಸಹಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಳಿಯ ಜ್ಯಾರೆಡ್ ಕುಶ್ನರ್ ಒಪ್ಪಿದ್ದಾರೆ ಎಂದು ಅವರ ವಕೀಲರು ಗುರುವಾರ ಹೇಳಿದ್ದಾರೆ.

ರಶ್ಯದ ಅಧಿಕಾರಿಗಳೊಂದಿಗೆ ಕುಶ್ನರ್ ಡಿಸೆಂಬರ್‌ನಲ್ಲಿ ನಡೆಸಿದ ಸಭೆಗಳ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿದೆ ಎಂದು ವರದಿಗಳ ಹಿನ್ನೆಲೆಯಲ್ಲಿ ವಕೀಲ ಜೇಮೀ ಗೋರ್‌ಲಿಕ್ ಈ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

‘‘ಈ ಸಭೆಗಳ ಬಗ್ಗೆ ತನಗೆ ಏನು ತಿಳಿದಿದೆಯೋ ಅದನ್ನು ಕಾಂಗ್ರೆಸ್‌ನೊಂದಿಗೆ ಹಂಚಿಕೊಳ್ಳಲು ಕುಶ್ನರ್ ಈ ಮೊದಲೇ ಮುಂದೆ ಬಂದಿದ್ದರು. ಇತರ ಯಾವುದೇ ತನಿಖೆಗಳ ಬಗ್ಗೆಯೂ ಅವರನ್ನು ಸಂಪರ್ಕಿಸಿದರೆ ಅವರು ಇದೇ ರೀತಿಯ ಸಹಕಾರವನ್ನು ನೀಡುತ್ತಾರೆ’’ ಎಂದು ಹೇಳಿಕೆ ತಿಳಿಸಿದೆ.

ಅಧ್ಯಕ್ಷ ಟ್ರಂಪ್‌ರ ಸಲಹಾಕಾರರೂ ಆಗಿರುವ ಕುಶ್ನರ್ ಕಳೆದ ವರ್ಷದ ಕೊನೆಯಲ್ಲಿ ಅಮೆರಿಕಕ್ಕೆ ರಶ್ಯದ ರಾಯಭಾರಿ ಸರ್ಗಿ ಕಿಸಲ್‌ಯಾಕ್ ಮತ್ತು ರಶ್ಯದ ಬ್ಯಾಂಕರ್ ಸರ್ಗಿ ಗೊರ್ಕೊವ್‌ರೊಂದಿಗೆ ಹಲವು ಸಭೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News