ಹತ್ಯೆಗಾಗಿ ಗೋಮಾರಾಟ ನಿಷೇಧ ಅಧಿಸೂಚನೆ: ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿರ್ಧಾರ: ಎಡಪಕ್ಷಗಳ ಟೀಕೆ
ತಿರುವನಂತಪುರಂ, ಮೇ 26: ದೇಶದ ಜನರ ಖಾದ್ಯದ ಪಟ್ಟಿಯನ್ನು (ಮೆನು) ಕೇಂದ್ರ ಸರಕಾರ ಸಿದ್ದಪಡಿಸಲಾಗದು. ಹತ್ಯೆಗಾಗಿ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಕೇಂದ್ರದ ಅಧಿಸೂಚನೆ ದಬ್ಬಾಳಿಕೆಯ ಕ್ರಮವಾಗಿದೆ ಎಂದು ಕೇರಳ ಸರಕಾರ ಟೀಕಿಸಿದೆ.
ಹತ್ಯೆಗಾಗಿ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಕೇಂದ್ರ ಸರಕಾರದ ನೂತನ ಅಧಿಸೂಚನೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಮತ್ತು ಸರ್ವಾಧಿಕಾರಿ ಕ್ರಮವಾಗಿದೆ. ಆರ್‌ಎಸ್‌ಎಸ್ ಮುಂತಾದ ಸಂಘಟನೆಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಬಲವಂತದಿಂದ ಜಾರಿಗೊಳಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ನಾವು ಆಸ್ಪದ ನೀಡುವುದಿಲ್ಲ. ಇಂತಹ ಇನ್ನಷ್ಟು ಅಧಿಸೂಚನೆ ಜಾರಿಯಾಗಲಿ, ನಾವು ಅವನ್ನು ಅನುಸರಿಸುವುದಿಲ್ಲ ಎಂದು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ತಿಳಿಸಿದರು. ಕೇರಳದಲ್ಲಿ ಸೇವಿಸಲಾಗುವ ಮಾಂಸಾಹಾರದಲ್ಲಿ ಶೇ.60ರಷ್ಟು ಗೋಮಾಂಸವಾಗಿದೆ . ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಮಾತ್ರವಲ್ಲದೆ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳಿಗೂ ಗೋಮಾಂಸ ಅತ್ಯಂತ ನೆಚ್ಚಿನ ಆಹಾರವಾಗಿದೆೆ.
ಕೇಂದ್ರ ಸರಕಾರದ ಅಧಿಸೂಚನೆಯನ್ನು ಕಾಂಗ್ರೆಸ್ ಕೂಡಾ ಟೀಕಿಸಿದೆ. ದೇಶದ ಸಂವಿಧಾನ ವಿರೋಧಿಯಾಗಿದ್ದು ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಕೇರಳ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಟೀಕಿಸಿದ್ದಾರೆ. ಈ ಅಧಿಸೂಚನೆಯನ್ನು ಜಾರಿಗೊಳಿಸಿದ ಸಮಯ ಕೂಡಾ ಇಲ್ಲಿ ಗಮನಾರ್ಹ. ಮುಸ್ಲಿಮರ ರಮಝಾನ್ ಪವಿತ್ರ ತಿಂಗಳು ಆರಂಭಗೊಳ್ಳುವ ಸಮಯವಿದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.