‘ಕಟ್ಟಡ ಕಾರ್ಮಿಕರ ಸೌಲಭ್ಯಗಳ ಮಂಜೂರಿಗೆ ವಿಳಂಬ ನೀತಿ ಸಲ್ಲ’

Update: 2017-05-26 16:11 GMT

ಉಡುಪಿ, ಮೇ 26: ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎಐಟಿಯುಸಿ) ಮೊದಲ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಉಡುಪಿ ಹಿಂದಿ ಪ್ರಚಾರ ಸಮಿತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಗಣಪತಿ ಪ್ರಭು ಹಿರಿಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಟ್ಟಡ ಕಾರ್ಮಿಕರು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದ್ದು, ಈ ಬಗ್ಗೆ ಮಹಾಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಮದುವೆ ಧನಸಹಾಯ, ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಸಹಾಯಧನವನ್ನು ವಿಳಂಬವಿಲ್ಲದೇ ಸಮರ್ಪಕ ವಾಗಿ ಜಾರಿಗೊಳಿಸುವಂತೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಐದು ವರ್ಷ ಪೂರೈಸಿದ ಕಟ್ಟಡ ಕಾರ್ಮಿಕರಿಗೆ ಎರಡು ಲಕ್ಷ ರೂ. ಮನೆ ಕಟ್ಟಲು ಸಾಲ ಸೌಲಭ್ಯದ ಘೋಷಣೆ ಮಾಡಿದ್ದರೂ, ಇದುವರೆಗೆ ಅರ್ಜಿ ನಮೂನೆಯನ್ನು ನೀಡದೇ ಸೌಲಭ್ಯ ಪಡೆಯಲು ಅವಕಾಶ ಸಿಗುತ್ತಿಲ್ಲ. ಕೂಡಲೇ ಮನೆ ಸಾಲ ಅರ್ಜಿಯನ್ನು ಸ್ವೀಕರಿಸಿ ಸೌಲಭ್ಯ ಜಾರಿಗೊಳಿಸುವಂತೆ, ಈಗ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಧನಸಹಾಯವನ್ನು ಒಂದನೇ ತರಗತಿಯಿಂದಲೇ ನೀಡುವಂತೆ, ವೈದ್ಯಕೀಯ ವೆಚ್ಚವನ್ನು ಸಮರ್ಪಕವಾಗಿ ನೀಡುವಂತೆ ಒತ್ತಾಯಿಸಲಾಯಿತು.

ಸಭೆಯನ್ನುದ್ದೇಶಿಸಿ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ನಾಯಕ ಬಿ.ಶೇಖರ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಭಟ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲ ನಾಯ್ಕಾ, ಲೋಕೇಸ ಕರ್ಕೇರ, ಎಐಟಿಯುಸಿ ಮುಖಂಡರಾದ ರಾಮ ಮೂಲ್ಯ ಶಿರ್ವ, ಸಂಜೀವ ಶೇರಿಗಾರ್, ಸೋಮಪ್ಪ ಜತ್ತನ್ನ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ಭಟ್ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದ್ದು, ಚರ್ಚೆಯ ಬಳಿಕ ಅದನ್ನು ಅಂಗೀಕರಿ ಸಲಾಯಿತು. ಬಳಿಕ 25 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಗಣಪತಿ ಪ್ರಭು, ಉಪಾದ್ಯಕ್ಷರಾಗಿ ಗೋಪಾಲ ನಾಯಕ್, ಲೋಕೇಶ ಕರ್ಕೇರ, ಸತೀಶ್ ಕುಲಾಲ್, ಪ್ರದಾನ ಕಾರ್ಯದರ್ಶಿ ಕೆ.ವಿ.ಭಟ್, ಕಾರ್ಯದರ್ಶಿಗಳು ದಿನೇಶ ಕನ್ನಡ, ಸುಧಾಕರ ನಾಯ್ಕ, ಶಿವಪೂಜಾರಿ, ಕೋಶಾಧಿಕಾರಿ ಶಶಿಕಲಾ ಗಿರೀಶ್ ಆಯ್ಕೆಯಾದರು.
ಕೆ.ವಿ.ಭಟ್ ಸ್ವಾಗತಿಸಿ, ಶಶಿಕಲಾ ಗಿರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News