ಇವಿಎಂ ಸವಾಲು ಸ್ವೀಕರಿಸಲು ಎನ್‌ಸಿಪಿ ಹೊರತಪಡಿಸಿ ಇತರ ಪಕ್ಷಗಳ ನಕಾರ
ಹೊಸದಿಲ್ಲಿ, ಮೇ 26: ಜೂನ್ 3ರಂದು ನಿಗದಿಯಾಗಿರುವ ಇವಿಎಂ(ವಿದ್ಯುನ್ಮಾನ ಮತಯಂತ್ರ) ಸವಾಲು ಕಾರ್ಯಕ್ರಮದಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಾತ್ರ ಪಾಲ್ಗೊಳ್ಳಲಿದೆ.
ಆಮ್ ಆದ್ಮಿ ಪಕ್ಷ(ಆಪ್), ಬಿಎಸ್‌ಪಿ ಸೇರಿದಂತೆ ಒಟ್ಟು 8 ರಾಜಕೀಯ ಪಕ್ಷಗಳು ಇವಿಎಂ ತಿರುಚುವಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜೂನ್ 3ರಂದು ಇವಿಎಂ ಸವಾಲು ಕಾರ್ಯಕ್ರಮ ಏರ್ಪಡಿಸಿದ್ದು , ಇವಿಎಂ ಬಗ್ಗೆ ಅನುಮಾನ ಇರುವವರು ಈ ದಿನ ಇವಿಎಂಗಳನ್ನು ತಿರುಚಬಹುದು ಎಂದು ಸವಾಲೆಸೆದಿತ್ತು.
ಆದರೆ ಎನ್‌ಸಿಪಿ ಬಿಟ್ಟರೆ ಉಳಿದೆಲ್ಲಾ ಪಕ್ಷಗಳು ಈ ಸವಾಲನ್ನು ಸ್ವೀಕರಿಸಿಲ್ಲ. ಎನ್‌ಸಿಪಿ ನಡೆಸುವ ಪ್ರಕ್ರಿಯೆಯನ್ನು ವೀಕ್ಷಿಸಲು ತಾವು ಬಯಸುವುದಾಗಿ ಸಿಪಿಐ, ಸಿಪಿಎಂ, ಆರ್‌ಎಲ್‌ಡಿ ತಿಳಿಸಿವೆ. ಜೂನ್ 3ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಸವಾಲು ಕಾರ್ಯಕ್ರಮ ನಡೆಯಲಿದೆ. ಪಂಜಾಬ್, ಉ.ಪ್ರದೇಶ ಮತ್ತು ಉತ್ತರಾಖಂಡದಿಂದ ಕೆಲವು ಇವಿಎಂಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ 4 ಇಎಂವಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಎನ್‌ಸಿಪಿಗೆ ನೀಡಲಾಗಿದೆ. ಆದರೆ ಚುನಾವಣಾ ಆಯೋಗ ನೀಡುವ ಯಂತ್ರಗಳನ್ನು ಬಳಸುವುದಾಗಿ ಎನ್‌ಸಿಪಿ ತಿಳಿಸಿದೆ. ಸವಾಲು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂವರು ಪ್ರತಿನಿಧಿಗಳನ್ನು ಎನ್‌ಸಿಪಿ ಸೂಚಿಸಿದೆ.
ಇಎಂವಿಗಳನ್ನು ತಿರುಚಿರುವ ಬಗ್ಗೆ ಭಾರೀ ಗದ್ದಲ ಎಬ್ಬಿಸಿದ್ದ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಆಯೋಗದ ಸವಾಲಿನಿಂದ ದೂರ ಉಳಿದಿವೆ. ಈ ಸವಾಲು ಸ್ವೀಕರಿಸುವ ಸಂದರ್ಭ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಆಯೋಗ ಸೂಚಿಸಿದೆ. ಈ ನಿಯಮಗಳು ನ್ಯಾಯಯುತ ‘ಇಎಂವಿ‘ ಪರೀಕ್ಷೆಗೆ ಅಡ್ಡಿಯಾಗಿರುವ ಕಾರಣ ಸವಾಲಿನಿಂದ ದೂರ ಉಳಿದಿದ್ದೇವೆ ಎಂದು ಈ ಪಕ್ಷಗಳು ಹೇಳಿಕೆ ನೀಡಿವೆ.
ಇಎಂವಿಯ ‘ಮದರ್‌ಬೋರ್ಡ್ ’ ಸೇರಿದಂತೆ ಎಲ್ಲಾ ಭಾಗಗಳನ್ನೂ ಪರಿಶೀಲಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗವು ಇಎಂವಿ ಸವಾಲಿಗೆ ವಿಧಿಸಿರುವ ಮೂರು ನಿಯಮಗಳು ಇಎಂವಿಗಳ ಕೂಲಂಕುಷ ಪರೀಕ್ಷೆಗೆ ಅಡ್ಡಿಯಾಗಿವೆ. ಈ ನಿಯಮಗಳನ್ನು ರದ್ದುಗೊಳಿಸಿ, ಇಎಂವಿ ಸವಾಲು ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ‘ಆಪ್’ ಪಕ್ಷ, ಹ್ಯಾಕಥಾನ್ ನಡೆಸುವುದಾಗಿ ನೀಡಿದ ಭರವಸೆಯಿಂದ ಪಲಾಯನ ಮಾಡಿರುವುದಾಗಿ ಆಯೋಗವನ್ನು ದೂರಿದೆ.