ಅಕ್ರಮ ಮರಳುಗಾರಿಕೆ: ಟಿಪ್ಪರ್ ವಶ
Update: 2017-05-26 22:19 IST
ಕೋಟ, ಮೇ 26: ಬೇಳೂರು ಗ್ರಾಮದ ತೆಂಕಬೆಟ್ಟು ಎಂಬಲ್ಲಿರುವ ನದಿ ತೋಡಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಸೊತ್ತುಗಳನ್ನು ವಶ ಪಡಿಸಿಕೊಂಡಿದೆ.
ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಹೇಶ ನೇತೃತ್ವದ ಅಧಿಕಾರಿಗಳ ತಂಡವು ಅಕ್ರಮ ಮರಳುಗಾರಿಕೆ ದಾಳಿ ನಡೆಸಿ, ಮೂರು ಮೆಟ್ರಿಕ್ ಟನ್ ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಹಾಗೂ ಅಕ್ರಮ ಮರಳುಗಾರಿಕೆಗೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಇವು ಗಳ ಒಟ್ಟು ಮೌಲ್ಯ ಸುಮಾರು 5,03,350 ರೂ. ಎಂದು ಅಂದಾಜಿಸಲಾಗಿದೆ.
ಈ ಅಕ್ರಮ ಮರಳುಗಾರಿಕೆಯನ್ನು ನಡೆಸಿ ಸರಕಾರಿ ಸೊತ್ತು ಕಳವು ಮಾಡಿರುವ ದಯಾನಂದ ಕೊಠಾರಿ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.