ನಗರಸಭೆ ಟ್ಯಾಂಕರ್ ನೀರು ಸರಬರಾಜಿಗೆ ಹಣ ಸಂಗ್ರಹ: ಕೊಡಂಕೂರು ನ್ಯೂ ಕಾಲನಿಯ ನಾಗರಿಕರ ಆರೋಪ
ಉಡುಪಿ, ಮೇ 26: ಉಡುಪಿ ನಗರಸಭೆ ವ್ಯಾಪ್ತಿಯ ಕೊಡಂಕೂರು ನ್ಯೂ ಕಾಲನಿಯಲ್ಲಿ ನಗರಸಭೆಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಮನೆಯವರಿಂದ ಹಣ ಸಂಗ್ರಹಿಸಿರುವ ಕುರಿತ ಆರೋಪಗಳು ಕೇಳಿ ಬಂದಿದ್ದು, ಇದಕ್ಕೆ ಸ್ಥಳೀಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಈ ಕಾಲನಿಯಲ್ಲಿ ಸುಮಾರು 100 ಮನೆಗಳಿದ್ದು, ಕಳೆದ ಮೂರು ತಿಂಗಳುಗಳಿಂದ ನೀರಿಲ್ಲದೆ ಇಲ್ಲಿನ ಜನ ತೀರಾ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಸ್ಥಳೀಯ ನಗರಸಭೆ ಸದಸ್ಯರಿಗೆ ತಿಳಿಸಿದರೂ ಈವರೆಗೆ ನೀರು ಸರಬರಾಜು ಮಾಡುವ ಕೆಲಸ ಮಾಡಿಲ್ಲ’ ಎಂದು ಸ್ಥಳೀಯ ಮಹಿಳೆಯರು ಮಾಧ್ಯಮದ ಮುಂದೆ ದೂರಿದ್ದಾರೆ.
ಕೆಲವೊಮ್ಮೆ ಟ್ಯಾಂಕರ್ ನೀರು ಬಂದರೂ ಎಲ್ಲ ಮನೆಗಳಿಗೆ ಸಾಕಾಗುವುದಿಲ್ಲ. ಅರ್ಧದಲ್ಲೇ ನೀರು ಖಾಲಿಯಾಗಿ ಟ್ಯಾಂಕರ್ ವಾಪಾಸ್ಸು ಹೋಗುತ್ತದೆ. ಈವರೆಗೆ ನಮಗೆ ಎಸ್‌ಡಿಪಿಐಯವರು ಉಚಿತವಾಗಿ ನೀರು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಸ್ಥಳೀಯ ನಗರಸಭೆ ಸದಸ್ಯರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು.
‘ಇಂದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ, ಟ್ಯಾಂಕರ್ ನವರು ಪ್ರತಿ ಮನೆಯವರಿಂದ 20ರೂ. ಹಣ ಸಂಗ್ರಹಿಸಿದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು 2000ರೂ. ಒಟ್ಟು ಮಾಡಿ ಟ್ಯಾಂಕರ್ ನೀರಿನ ಹಣವನ್ನು ಸ್ಥಳೀಯರಿಂದಲೇ ಸಂಗ್ರಹಿಸಿಕೊಂಡರು. ಕುಡಿಯುವ ನೀರಿಗೆ ಸರಕಾರದಿಂದ ಲಕ್ಷಾಂತರ ಹಣ ಬಿಡುಗಡೆಯಾಗಿದ್ದರೂ ಜನರಿಂದ ಹಣ ಪಡೆಯುತ್ತಿರುವುದು ಖಂಡನೀಯ’ ಎಂದು ಸ್ಥಳೀಯ ನಿವಾಸಿ ಸಲಿೀಂ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸ್ಥಳೀಯರು ಕೂಡಲೇ ಸ್ಥಳೀಯ ನಗರಸಭೆ ಸದಸ್ಯೆಯ ಪತಿಗೆ ದೂರ ವಾಣಿ ಮೂಲಕ ಸಂಪರ್ಕಿಸಿದರು. ಆದರೆ ಅವರು ಅದನ್ನು ಸಮರ್ಥಿಸಿ ಕೊಂಡು ಹಣ ನೀಡುವಂತೆ ಹೇಳಿದ ಆಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಕುಡಿಯುವ ನೀರಿಗಾಗಿ ಮನೆಯವರಿಂದ ಹಣ ಪಡೆದುಕೊಂಡ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಮೋದ್ ಮಧ್ವರಾಜ್, ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿ ದ್ದೇನೆ. ಇನ್ನು ಮುಂದೆ ಜನ ಕುಡಿಯುವ ನೀರಿಗೆ ಹಣ ನೀಡಬಾರದು. ಯಾರಾ ದರೂ ಕೇಳಿದರೆ ನೇರವಾಗಿ ನನ್ನನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
‘ಸಚಿವರ ಸೂಚನೆಯಂತೆ ವಿಚಾರಣೆ ನಡೆಸಲು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಇದರಲ್ಲಿ ತಪ್ಪು ಕಂಡುಬಂದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ಪತ್ರಿಕೆಗೆ ತಿಳಿಸಿದ್ದಾರೆ.