ಕೊಡಿಬೆಟ್ಟು: 3.30 ಕೋಟಿ ರೂ. ಕಾಮಗಾರಿಗೆ ಸೊರಕೆ ಚಾಲನೆ
ಹಿರಿಯಡ್ಕ, ಮೇ 26: ಇಲ್ಲಿಗೆ ಸಮೀಏಪದ 39ನೇ ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ 3.30 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಚಾಲನೆ ನೀಡಿದರು.
ಪೆರ್ಣಂಕಿಲ ಗ್ರಾಮದ ಚಿತ್ರಬೈಲ್‌ನಲ್ಲಿ 2.28 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸೊರಕೆ, ಕೇವಲ 4 ವರ್ಷಗಳ ಅವಧಿಯಲ್ಲಿ 39ನೇ ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ 12 ಕೋಟಿಗೂ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ ಎಂದರು.
ಈಗಾಗಲೇ ಕಾಪು ಕ್ಷೇತ್ರ ತಾಲೂಕು ಆಗಿ ಘೋಷಣೆ ಆಗಿದ್ದು ಈ ಭಾಗದಲ್ಲಿ ಹಿರಿಯಡಕವನ್ನು ನಾಡಕಚೇರಿ ಮಾಡುವ ಬಗ್ಗೆ ಕೂಡ ಪ್ರಯತ್ನಿಸಲಾಗುತ್ತಿದೆ. ಕಾಪು ಹಾಗೂ ಹಿರಿಯಡಕ ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ, ಆದ್ದರಿಂದ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಿ ಅಭಿವೃದ್ದಿಗೆ ಪ್ರಯತ್ನಿಸಲಾಗುವುದು ಎಂದು ಸೊರಕೆ ನುಡಿದರು.
ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತಾಡಿ, ಚಿತ್ರಬೈಲಿನಲ್ಲಿ ಇಂದು ನಡೆದ ಗುದ್ದಲಿ ಪೂಜೆಯಿಂದಾಗಿ ಕಾರ್ಕಳ ಮತ್ತು ಕಾಪು ಕ್ಷೇತ್ರದ ಈ ಭಾಗದ ಜನರಿಗೆ ತುಂಬಾ ಪ್ರಯೋಜನವಾಗಿದೆ ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯೋಪಾದ್ಯಾಯ ಕುದಿ ವಸಂತಶೆಟ್ಟಿ ಪ್ರಸ್ತಾವಿಕ ವಾಗಿ ಮಾತನಾಡಿ, ಈ ಭಾಗದ ಬಲು ದೊಡ್ಡ ಬೇಡಿಕೆಯನ್ನು ಈಡೇರಿಸಿದ ವಿನಯಕುಮಾರ್ ಸೊರ ಒಬ್ಬ ಮಾದರಿ ಶಾಸಕ ಎಂದರು.
ತಾಪಂ ಸದಸ್ಯ ಕೆ.ಲಕ್ಷ್ಮೀನಾರಾಯಣ ಪ್ರಭು ಸ್ವಾಗತಿಸಿ ಪೆರ್ಣಂಕಿಲ ಗ್ರಾಮದ ಎರಡು ಬಹು ದೊಡ್ಡ ಬೇಡಿಕೆಯಾದ ಕೋಚರಪ್ಪು ಮತ್ತು ಚಿತ್ರಬೈಲ್ ರಸ್ತೆಗೆ ಅನುದಾನ ಒದಗಿಸಿ ಕೊಟ್ಟ ಶಾಸಕರಿಗೆ ಗ್ರಾಪಂ ವ್ಯಾಪ್ತಿಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಜಿಪಂ ಸದಸ್ಯೆ ಚಂದ್ರಿಕಾ ಕೇಲ್ಕರ್, ತಾಪಂ ಸದಸ್ಯೆ ಸಂಧ್ಯಾಶೆಟ್ಟಿ, ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಉಪಾಧ್ಯಕ್ಷ ಗಣೇಶ ಶೆಟ್ಟಿ, ಹಿರಿಯರಾದ ವಿಶ್ವನಾಥ ಶೆಟ್ಟಿ, ರಾಮಮೂರ್ತಿ ಭಟ್, ಹಿರ್ಗಾನ ಗ್ರಾಪಂ ಅಧ್ಯಕ್ಷ ಸಂತೋಷ ಶೆಟ್ಟಿ, ಇಂಜಿನಿಯರ್ ಹೇಮಂತ್, ಪ್ರಮುಖರಾದ ವಿನೋದ್ ಕುಮಾರ್, ಭಾಸ್ಕರ ಪೂಜಾರಿ, ಶಿವಣ್ಣ ಶೆಟ್ಟಿ, ಗ್ರಾಪಂ ಸದಸ್ಯರಾದ ಸಂತೋಷ ಶೆಟ್ಟಿ ಕುದಿ, ಚರಣ್‌ವಿಠಲ್, ಶಶಿಧರ ಜತ್ತನ್ನ ಮುಂತಾದವರು ಉಪಸ್ಥಿತರಿದ್ದರು.