ಮಂಗಳೂರು -ಬೆಂಗಳೂರು ಹೈಸ್ಪೀಡ್ ಹೆದ್ದಾರಿ: 5 ವರ್ಷದಲ್ಲಿ ಕಾರ್ಯಗತ- ಸಂಸದ ನಳಿನ್
ಪುತ್ತೂರು, ಮೇ 26: ಕರಾವಳಿಯ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಯಲ್ಲಿ ತಲುಪಬಹುದಾದ ಮೆಗಾ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಭಾರತ ಮಾಲಾ ಯೋಜನೆಯಲ್ಲಿ ರೂ. 1.18 ಲಕ್ಷ ಕೋಟಿ ಅನುದಾನವನ್ನು ಇದಕ್ಕಾಗಿ ಮಂಜೂರು ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ನಾಲ್ಕು ರಸ್ತೆಗಳನ್ನು ಮೊದಲ ಹಂತದಲ್ಲಿ ಭಾರತ ಮಾಲಾ ಎಂಬ ಯೋಜನೆಗೆ ಆರಿಸಲಾಗಿದೆ. ಮಂಗಳೂರು- ಬೆಂಗಳೂರು, ಮುಂಬಯಿ - ಕೊಲ್ಕತ್ತಾ, ಲೂಧಿಯಾನಾ - ಕಾಂಡ್ಲಾ, ಪೋರಬಂದರ್ - ಸಿಲ್ಚಾರ್ ರಸ್ತೆಗಳನ್ನು ಆರಿಸಲಾಗಿದ್ದು, ಇದಕ್ಕಾಗಿ ಒಟ್ಟು ರೂ .3.8 ಲಕ್ಷ ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಮಂಗಳೂರು -ಬೆಂಗಳೂರು ಹೈಸ್ಪೀಡ್ ಹೆದ್ದಾರಿ ನಿರ್ಮಾಣಕ್ಕೆ ರೂ. 1.18 ಲಕ್ಷ ಕೋಟಿ ವೆಚ್ಚವಾಗಲಿದೆ. ಈ ಹೈಸ್ಪೀಸ್ ಹೆದ್ದಾರಿ ನಿರ್ಮಾಣವಾದ ಬಳಿಕ ಕೇವಲ ನಾಲ್ಕು ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಈ ಹೆದ್ದಾರಿಯಲ್ಲಿ ಎಲ್ಲೂ ಕೂಡ ಅನಗತ್ಯ ಯು ಟರ್ನ್‌ಗಳಿರುವುದಿಲ್ಲ. ತಿರುವುಗಳ ,ಏರು ರಸ್ತೆಗಳ ಪ್ರಮಾಣ ತೀರಾ ಕಡಿಮೆ ಇರಲಿದೆ. ರಸ್ತೆಯು ಅತಿ ವಿಶಾಲವಾಗಿದ್ದು, ಸರಕು ವಾಹನಗಳಿಗೆ ಪ್ರತ್ಯೇಕ ರಸ್ತೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ನೋಟು ರದ್ದು ಮಾಡಿ ಓಟು ಪಡೆದ ಮೋದಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಇಡೀ ಜಗತ್ತೇ ಮೆಚ್ಚುವಂಥ ಆಡಳಿತ ನೀಡಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾನು ಮೋದಿ ಮಾದರಿಯ ಆಡಳಿತ ನೀಡುವುದಾಗಿ ಹೇಳಿದ್ದು, ನಮ್ಮ ಪ್ರಧಾನಿಯವರ ವರ್ಚಸ್ಸಿಗೆ ಸಂಕೇತವಾಗಿದೆ. ಜಗತ್ತಿನೆಲ್ಲೆಡೆ ಆರ್ಥಿಕ ಕುಸಿತದ ಹೊರತಾಗಿಯೂ ಭಾರತದ ಆರ್ಥಿಕತೆ ಸದೃಢವಾಗಿ ನಿಂತಿದೆ. ಕರೆನ್ಸಿ ನಿಷೇಧದಂಥ ಕಠಿಣ ನಿರ್ಧಾರ ಕೈಗೊಂಡರೂ ದೇಶದ ಆರ್ಥಿಕತೆಗೆ ಯಾವ ತೊಂದರೆಯೂ ಆಗಿಲ್ಲ. ಹಿಂದೆಲ್ಲ ನೋಟು ಕೊಟ್ಟು ಓಟು ಪಡೆಯುವ ಚಾಳಿ ಇದ್ದರೆ ಮೋದಿ ಅವರು ನೋಟು ರದ್ದು ಮಾಡಿ ಓಟು ಪಡೆದುಕೊಂಡರು. ಇದು ಜಾಗತಿಕ ಮಟ್ಟದ ಸಾಧನೆ ಎಂದು ಅವರು ತಿಳಿಸಿದರು.
ಮ್ಯಾನ್ಮಾರ್‌ನ ನುಸುಳುಕೋರರ ತಡಗೆ ನಡೆಸಿದ ಕ್ಷಿಪ್ರ ದಾಳಿ, ಪಾಕ್ ದುಸ್ಸಾಹಕ್ಕೆ ನೀಡಿದ ಸರ್ಜಿಕಲ್ ಸ್ಟ್ರೈಕ್‌ನ ಉತ್ತರ ಇವೆಲ್ಲವೂ ದೇಶದ ಬಲಿಷ್ಠತೆಯನ್ನು ಸಾಬೀತು ಮಾಡಿವೆ. ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದು, ನೂರಾರು ಯೋಜನೆಗಳು ಜಾರಿಗೊಳ್ಳುತ್ತಿವೆ. ಸ್ವಚ್ಛ ಭಾರತದ ಮೂಲಕ ಇಡೀ ದೇಶವೇ ಸ್ವಚ್ಛಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ದೇಶದಲ್ಲಿ 18,000 ಗ್ರಾಮಗಳು ಕತ್ತಲಲ್ಲಿದ್ದವು. ಮೋದಿ ಸರ್ಕಾರ ಜಾರಿಗೆ ತಂದ ದೀನದಯಾಳ್ ಜ್ಯೋತಿ ಯೋಜನೆಯ ಮೂಲಕ ಕತ್ತಲು ಗ್ರಾಮಗಳ ಸಂಖ್ಯೆ ಕಡಿಮೆಯಾಗಿ ಈಗ ಕೇವಲ 5ಸಾವಿರ ಹಳ್ಳಿಗಳು ಮಾತ್ರ ಕತ್ತಲಲ್ಲಿ ಉಳಿದಿವೆ. ಮುಂದಿನ ವರ್ಷಗಳಲ್ಲಿ ಅದು ಕೂಡ ಬೆಳಕು ಕಾಣಲಿವೆ ಎಂದು ಅವರು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್ ಇದ್ದರು.