ಚೂರಿ ಇರಿತ ಖಂಡಿಸಿ ಕಲ್ಲಡ್ಕ ಬಂದ್

Update: 2017-05-27 05:43 GMT

ಬಂಟ್ವಾಳ, ಮೇ 27: ಕಲ್ಲಡ್ಕದಲ್ಲಿ ಅಮಾಯಕ ಯುವಕರಿಬ್ಬರ ಮೇಲೆ ಶುಕ್ರವಾರ ಮಧ್ಯಾಹ್ನ ನಡೆದ ಚೂರಿ ಇರಿತ ಪ್ರಕರಣವನ್ನು ಖಂಡಿಸಿ ಕಲ್ಲಡ್ಕದಲ್ಲಿಂದು ಬೆಳಗ್ಗೆಯಿಂದ ಬಂದ್ ಆಚರಿಸಲಾಗುತ್ತಿದೆ.

ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕದ ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಪೇಟೆಯಲ್ಲಿ ಎರಡು ಗುಂಪುಗಳು ಪ್ರತ್ಯೇಕವಾಗಿ ಅಲ್ಲಲ್ಲಿ ಸೇರಿ ಆತಂಕದ ವಾತಾವರಣ ಮೂಡಿದೆ.

ಈ ನಡುವೆ ಮುಚ್ಚಿರುವ ಅಂಗಡಿಗಳನ್ನು ತೆರೆಯುವಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದಲ್ಲಿ ತಂಡವೊಂದು ರಸ್ತೆಗಿಳಿದು ಒತ್ತಾಯಿಸುತ್ತಿದೆ. ಬಂದ್ ಕರೆ ನೀಡಿರುವವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸದ್ಯ ಕಲ್ಲಡ್ಕ ಬಹುತೇಕ ಬಂದ್ ಆಗಿದೆ. ಪೇಟೆಯಲ್ಲಿ ಜನಸಂಚಾರ ವಿರಳವಾಗಿದೆ.

ಸ್ಥಳದಲ್ಲಿ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಂ ಹೂಡಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯಾಹ್ನ ಜುಮಾ ನಮಾಝ್ ನಿರ್ವಹಿಸಿ ಮಸೀದಿಯಿಂದ ಮನೆಗೆ ಹಿಂದಿರುಗುತ್ತಿದ್ದ ಮುಹಮ್ಮದ್ ಹಾಶಿರ್ ಹಾಗೂ ವಿದ್ಯಾರ್ಥಿ ಮುಹಮ್ಮದ್ ಮಾಶೂಕ್ ಎಂಬವರ ಮೇಲೆ ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿತ್ತು. ಈ ಸಂದರ್ಭ ಅಪಾಯದ ಮುನ್ಸೂಚನೆ ಅರಿತ ಯುವಕರಿಬ್ಬರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕೃತ್ಯವನ್ನು ಖಂಡಿಸಿ ಇಂದು ಕಲ್ಲಡ್ಕ ಬಂದ್‌ಗೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News