ಸೌದಿಯಲ್ಲಿ ಸಂಕಷ್ಟಕ್ಕೀಡಾಗಿದ್ದ ಇಬ್ಬರು ಯುವಕರು ತಾಯ್ನಾಡಿಗೆ

Update: 2017-05-27 07:39 GMT

ಮಂಗಳೂರು, ಮೇ 27: ಉದ್ಯೋಗಕ್ಕಾಗಿ ಕೆಲವು ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿ, ಕಂಗಾಲಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ಇಂಡಿಯನ್ ಸೋಶಿಯಲ್ ಫೋರಂ (ಐಎಸ್‌ಎಫ್) ರಕ್ಷಿಸಿ ತಾಯ್ನಾಡಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ.

 ಗಂಜಿಮಠದ ನಿವಾಸಿ ದಾಮೋದರ್ (31) ಮತ್ತು ಮುಲ್ಕಿ ಕೊಲ್ನಾಡ್‌ನ ನಿವಾಸಿ ಪುನೀತ್ (25) ಐಎಸ್‌ಎಫ್ ನೆರವಿನಿಂದ ಶನಿವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಸಂದರ್ಭದಲ್ಲಿ ಪುನೀತ್‌ರ ತಂದೆ ಜಯರಾಜ್, ತಾಯಿ ಮಂಜುಳಾ, ದಾಮೋದರ್ ಅವರ ಸಂಬಂಧಿಕರು ಮತ್ತು ಅಬ್ದುಲ್ ಜಬ್ಬಾರ್, ಎಸ್‌ಡಿಪಿಐ ಮುಲ್ಕಿ ವಲಯ ಕಾರ್ಯದರ್ಶಿ ತೌಸೀಫ್, ಐಎಸ್‌ಎಫ್ ಸದಸ್ಯ ಇಮ್ರಾನ್ ಕೊಳ್ನಾಡ್, ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕೇತ್ರ ಸಮಿತಿ ಸದಸ್ಯ ಹಾರಿಸ್, ಕಾರ್ಯದರ್ಶಿ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದಿಂದ ಹೊರಬಂದ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

*ವರ್ಕ್‌ಶಾಪ್‌ನಲ್ಲಿ ಕೆಲಸವೆಂದು ಕುರಿ ಮೇಯಿಸಲು ಕಳುಹಿಸಿದರು: ದಾಮೋದರ್
ಸೌದಿಯಲ್ಲಿ ವರ್ಕ್‌ಶಾಪ್‌ನಲ್ಲಿ ಕೆಲಸ ಎಂದು ಹೇಳಿ ಮಂಗಳೂರಿನ ಏಜೆಂಟ್‌ನ ಮುಖಾಂತರ ಸೌದಿಗೆ ತೆರಳಿ ಅಲ್ಲಿ ಕುರಿ ಮೇಯಿಸುವ ಕೆಲಸಕ್ಕೆ ಕಳುಹಿಸಿದರು ಎಂದು ಕೆಲವು ತಿಂಗಳ ಕಾಲ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿ ತಾಯ್ನಾಡಿಗೆ ಮರಳಿರುವ ಗಂಜಿಮಠದ ನಿವಾಸಿ ದಾಮೋದರ್ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, "ಕಳೆದ ಡಿಸೆಂಬರ್ 20ರಂದು ಮಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ತೆರಳಿದ್ದೆ. ಅಲ್ಲಿ ವರ್ಕ್‌ಶಾಪ್‌ಗೆ ತೆರಳಿದಾಗ ಅದು ಯಾವುದೇ ಸಿಬ್ಬಂದಿ ಇಲ್ಲದೆ ನಡೆಸಲ್ಪಡುತ್ತಿರಲಿಲ್ಲ. ಈ ಬಗ್ಗೆ ನಾವು ಏಜೆಂಟ್‌ನ್ನು ಸಂಪರ್ಕಿಸಿ ಇಲ್ಲಿ ಕೆಲಸ ಇಲ್ಲ ಎಂದಾಗ ಸ್ವಲ್ಪ ತಾಳ್ಮೆ ವಹಿಸುಂತೆ ಹೇಳಿದರು. ಹೀಗೆ ಎರಡು ತಿಂಗಳು ಮೂರು ತಿಂಗಳು ಕಳೆಯಿತು. ಯಾವುದೇ ಕೆಲಸವಿಲ್ಲದೆ, ಕಂಗಾಲಾಗಿದ್ದೆವು. ನಮ್ಮ ಕಫೀಲ್ ನಮಗೆ ಊಟ ಕೊಡುತ್ತಿದ್ದ, ತಿಂಗಳ ವೇತನ ಕೊಟ್ಟಿಲ್ಲ. ಈ ಬಗ್ಗೆ ಮತ್ತೆ ನಾವು ಏಜೆಂಟ್‌ನ್ನು ಸಂಪರ್ಕಿಸಿ ಮೂರು ತಿಂಗಳಾದರೂ ಕೆಲಸವಿಲ. ಸಂಬಳವೂ ಸಿಕ್ಕಿಲ್ಲ ಎಂದಾಗ ಎಲ್ಲಾ ಸಹಿಯಾಗುತ್ತದೆ. ನಿಮಗೆ ಕೆಲಸ ಇಲ್ಲದಿದ್ದರೂ ತಿಂಗಳ ವೇತನ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಎಪ್ರಿಲ್ 20ರಂದು ನಮಗೆ ಕೆಲಸ ಇದೆ ಎಂದು ಹೇಳಿ ಕುರಿ ಮೇಯಿಸಲು ಕರೆದುಕೊಂಡು ಹೋದರು. ಅದಾಗಲೇ ನಾವು ಮೋಸ ಹೋಗಿರುವ ಬಗ್ಗೆ ನಮಗೆ ಅರಿವಾಯಿತು. ಕೆಲವು ದಿನಗಳ ಕಾಲ ನಾವು ಆ ಮರುಭೂಮಿಯಲ್ಲಿ ಕುರಿ ಮೇಯಿಸುವ ಕೆಲಸ ಮಾಡಿಕೊಂಡಿದ್ದೆವು. ಅನಂತರ ನಾವು ನಮ್ಮ ಏಜೆಂಟ್‌ನ್ನು ಸಂಪರ್ಕಿಸಿ ನಮಗೆ ಮರಳಿ ಊರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದೆವು. ಆದರೆ, ಅವರು ಅದಕ್ಕೆ ಸ್ಪಂದಿಸಲಿಲ್ಲ'' ಎಂದು ದಾಮೋದರ್ ನಡೆದ ಘಟನೆಯನ್ನು ವಿವರಿಸಿದರು.

*ನೆರವಿಗೆ ಧಾವಿಸಿದ ಐಎಸ್‌ಎಫ್
"ನಮ್ಮ ಸಂಕಷ್ಟವನ್ನು ಭಾರತದ ಮಾಧ್ಯದವರನ್ನು ಸಂಪರ್ಕಿಸಿ ವಿಷಯ ತಿಳಿಸಿದೆವು. ಸುದ್ದಿ ಪ್ರಕಟವಾಗುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಐಎಸ್‌ಎಫ್ ಪದಾಧಿಕಾರಿಗಳು ಹಾಗೂ ಸದಸ್ಯರು ನಮ್ಮ ನೆರವಿಗೆ ಧಾವಿಸಿದರು. ಅವರು ನಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಮ್ಮಿಂದ ಮಾಹಿತಿ ಪಡೆದು ಹೆದರದಂತೆ ಧೈರ್ಯ ತುಂಬಿದರು" ಎಂದು ದಾಮೋದರ್ ಹೇಳಿದರು.

*ಕಫೀಲ್ ವಿರುದ್ಧ ಕಾರ್ಮಿಕ ಕೋರ್ಟ್‌ಗೆ ದೂರು ದಾಖಲಿಸಿದ ಐಎಸ್‌ಎಫ್
"ಏನು ಮಾಡಬೇಕು. ಹೇಗೆ ಊರಿಗೆ ಮರಳಬೇಕೆಂಬುದರ ಬಗ್ಗೆ ಯವುದೇ ದಾರಿ ತೋಚದೇ ಇದ್ದಾಗ ಸಹಾಯಕ್ಕೆ ಧಾವಿಸಿದ ಐಎಸ್‌ಎಫ್‌ನವರು ಸೌದಿಯ ಕಾಮಿಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದರು. ಕೆಲಸ ಮತ್ತು ಸಂಬಳ ನೀಡದ ಕಫೀಲ್‌ನ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗುತ್ತಿದ್ದಂತೆ ಕಾರ್ಮಿಕ ನ್ಯಾಯಾಲಯವು ಕಫೀಲ್‌ನನ್ನು ಹಾಜರಾಗುವಂತೆ ಸೂಚಿಸಿತ್ತು. ಹಲವು ದಿನಗಳ ಐಎಸ್‌ಎಫ್ ಪದಾಧಿಕಾರಿಗಳು ನಡೆಸಿದ ನಿರಂತರ ಹೋರಾಟದ ಫಲವಾಗಿ ಕೊನೆಗೂ ನಾವು ಊರಿಗೆ ಮರಳುವಂತಾಯಿತು" ಎಂದು ದಾಮೋದರ್ ಮಾಹಿತಿ ನೀಡಿದರು.

ಭವಿಷ್ಯ ರೂಪಿಸುವ ಕನಸಿನೊಂದಿಗೆ ತೆರಳಿದ್ದೆ: ಪುನೀತ್
"ವಿದೇಶಕ್ಕೆ ತೆರಳಿ ಹಣ ಸಂಪಾದನೆ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಕನಸನ್ನು ಹೊತ್ತುಕೊಂಡು ಸೌದಿ ಅರೇಬಿಯಾಕ್ಕೆ ತೆರಳಿದ್ದೆ. ತೀವ್ರ ಕಾಡುತ್ತಿದ್ದ ಆರ್ಥಿಕ ಸಂಕಷ್ಟದಿಂದ ಹೊರಬರಲು ಮತ್ತು ಮನೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಸೌದಿಗೆ ತೆರಳಿದ್ದೆ. ಆದರೆ, ಅಲ್ಲಿ ಕೆಲವು ತಿಂಗಳ ಕಾಲ ಕೆಲಸವಿಲ್ಲದೆ, ಇತ್ತ ಮನೆಗೂ ಹಣ ಕಳುಹಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದೆ" ಎಂದು ಸೌದಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದ ಮುಲ್ಕಿ ಕೊಳ್ನಾಡಿನ ನಿವಾಸಿ ಪುನೀತ್ ತಿಳಿಸಿದ್ದಾರೆ.

ಎರಡು-ಮೂರು ತಿಂಗಳಾದರೂ ನಾವು ಸಂಬಳ ಪಡೆದಿರಲಿಲ್ಲ. ನಾನು ಮೋಸ ಹೋಗಿದ್ದ ಬಗ್ಗೆ ನನ್ನ ತಂದೆ-ತಾಯಿಯವರಿಗೆ ತಿಳಿಸುತ್ತಿರಲಿಲ್ಲ. ಆರ್ಥಿಕ ಸಂಕಷ್ಟದಲ್ಲಿದ್ದ ತನ್ನ ಮನೆಯವರನ್ನು ಇನ್ನಷ್ಟು ನೋವು ಕೊಡಲು ನಾನು ಬಯಸಿರಲಿಲ್ಲ. ಕೊನೆಗೂ ಮನೆಯವರಿಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ್ದೆ. ತಾನು ಮೋಸ ಹೋಗಿದ್ದನ್ನು ಕೇಳಿ ಮನೆಯವರೂ ತುಂಬಾ ನೊಂದಿಕೊಡಿದ್ದರು. ಕೊನೆಗೂ ನನ್ನ ತಾಯಿ ನಮ್ಮ ನೆರೆಮನೆಯವರೇ ಆಗಿರುವ ಅಬ್ದುಲ್ ಜಬ್ಬಾರ್ ಅವರನ್ನು ಸಂಪರ್ಕಿಸಿ ವಿಷಯವನ್ನುತಿಳಿಸಿದ್ದರು. ಜಬ್ಬಾರ್ ಅವರು ಕೂಡಲೇ ಸೌದಿಯಲ್ಲಿರುವ ತನ್ನ ಪುತ್ರ ಹಾಗೂ ಐಎಸ್‌ಎಫ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಎಂಬವರನ್ನು ಫೋನ್‌ನಲ್ಲಿ ಸಂಪರ್ಕಿಸಿ ವಿಷಯ ತಿಳಿಸಿದ್ದರು. ಕೂಡಲೇ ಅವರು ಐಎಸ್‌ಎಫ್ ಪದಾಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ನೆರವಿಗೆ ಧಾವಿಸಿದ್ದಾರೆ" ಎಂದು ಪುನೀತ್ ತಿಳಿಸಿದರು.

ನಾಲ್ಕು ದಿನಗಳ ಚೆನ್ನಾಗಿ ನೋಡಿಕೊಂಡರು
"ಐಎಸ್‌ಎಫ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಮ್ಮಿಬ್ಬರನ್ನು ಅವರ ಕೊಠಡಿಗೆ ಕರೆಸಿ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ನಾಲ್ಕು ದಿನಗಳ ಕಾಲ ಊಟೋಪಚಾರವನ್ನು ನೀಡಿ ಚೆನ್ನಾಗಿ ನೋಡಿಕೊಂಡರು. ಸಂಘಟನೆಯ ಫಾರೂಕ್ ಸಹಿತ ಇತರ ಹಲವು ಮಂದಿ ಯುವಕರು ಕೊನೆಯವರೆಗೂ ನೆರವಿಗೆ ನಿಂತರು. ಕೆಲವು ತಿಂಗಳ ಸಂಬಳವನ್ನು ನಮಗೆ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಸಂಕಷ್ಟಕ್ಕೆ ಸ್ಪಂದಿಸಿದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಪುನೀತ್ ನುಡಿದರು

ಮಗನ ದುರವಸ್ಥೆಯಿಂದ ನೊಂದಿದ್ದ ತನಗೆ ಧೈರ್ಯ ತುಂಬಿದರು: ಮಂಜುಳಾ
"ಸೌದಿಗೆ ತೆರಳಿ ಮೋಸಕ್ಕೊಳಗಾಗಿ ತೀವ್ರವಾಗಿ ನೊಂದಿದ್ದ ನನಗೆ ಅಬ್ದುಲ್ ಜಬ್ಬಾರ್ ಧೈರ್ಯ ತುಂಬಿದರು" ಎಂದು ತನ್ನ ಮಗ ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಪುನೀತ್‌ರ ತಾಯಿ ಮಂಜುಳಾ ತಿಳಿಸಿದ್ದಾರೆ.

‘‘ಸಂಕಷ್ಟಕ್ಕೊಳಗಾದ ತನ್ನ ಮಗನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವಂತಾಗಲು ತನಗೆ ನೆರವು ನೀಡುವಂತೆ’’ ಜಬ್ಬಾರ್‌ರ ಮನೆಗೆ ತೆರಳಿ ಅವರಲ್ಲಿ ಕೇಳಿಕೊಂಡಾಗ ಹೆದರದಂತೆ ಧೈಯ ತುಂಬಿದರು. ಕೂಡಲೇ ಸ್ಪಂದಿಸಿದ ಅವರು ಸೌದಿಯಲ್ಲಿರುವ ಅವರ ಮಗ ಫಾರೂಕ್‌ನನ್ನು ಸಂಪರ್ಕಿಸಿ ವಿಷಯ ತಿಳಿಸಿದರು ಎಂದರು.

ಐಎಸ್‌ಎಫ್‌ಗೆ ವಂದಿಸುತ್ತೇನೆ
"ನನ್ನ ಮಗನನ್ನು ಸುರಕ್ಷಿತವಾಗಿ ಊರಿಗೆ ಮರಳುವಂತೆ ಮಾಡಿರುವ ಐಎಸ್‌ಎಫ್ ತಂಡದ ಸದಸ್ಯರನ್ನು ನಾನು ವಂದಿಸುತ್ತೇನೆ. ನನ್ನ ಮಗನ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿ ನ್ಯಾಯ ಸಿಗುವವರೆಗೆ ಹೋರಾಟ ನಡೆಸಿದ ತಂಡದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು ಪುನೀತ್‌ರ ತಾಯಿ ಮಂಜುಳಾ.

ಮಾಧ್ಯಮದವರ ಮುಂದೆ ಮಾತನಾಡಿದ ಎಸ್‌ಡಿಪಿಐ ಮುಲ್ಕಿ ವಲಯ ಕಾರ್ಯದರ್ಶಿ ತೌಸೀಫ್, "ಇಬ್ಬರು ಯುವಕರನ್ನು ತಾಯ್ನಿಡಿಗೆ ಕಳುಹಿಸುವಲ್ಲಿ ಸೌದಿಯ ಐಎಸ್‌ಎಫ್‌ನ ಫಾರೂಕ್ ಮತ್ತು ಪದಾಧಿಕಾರಿಗಳು ತುಂಬಾ ಶ್ರಮ ವಹಿಸಿದ್ದಾರೆ. ಐಎಸ್‌ಎಫ್ ಪದಾಧಿಕಾರಿಗಳು ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಅವರ ಉದ್ಯೋಗ ಮತ್ತು ಒತ್ತಡಗಳ ನಡುವೆಯೂ ಈ ಇಬ್ಬರ ಯುವಕರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದಾರೆ" ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News