ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ವಾನಿ ಉತ್ತರಾಧಿಕಾರಿ ಸಬ್ಝರ್ ಭಟ್ ಸಹಿತ 8 ಉಗ್ರರ ಹತ್ಯೆ

Update: 2017-05-27 15:35 GMT

ಶ್ರೀನಗರ, ಮೇ 27: ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪು ಹಿಝ್‌ಬುಲ್ ಮುಜಾಹಿದೀನ್‌ನ ಕಮಾಂಡರ್ ಬರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಝರ್ ಭಟ್ ಸಹಿತ ಎಂಟು ಉಗ್ರರು ಜಮ್ಮು ಕಾಶ್ಮೀರದಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮೃತರಾಗಿದ್ದಾರೆ.

   ಜಮ್ಮುವಿನ ಪುಲ್ವಾಮಾ ಜಿಲ್ಲೆಯ ಟ್ರಾಲ್ ವಿಭಾಗದಲ್ಲಿರುವ ಕಟ್ಟಡವೊಂದರಲ್ಲಿ ಭಟ್ ಹಾಗೂ ಮತ್ತೋರ್ವ ಉಗ್ರ ಅವಿತುಕೊಂಡಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಕಟ್ಟಡವನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದಾಗ ಸಬ್ಝರ್ ಭಟ್ ಮತ್ತಾತನ ಸಹಚರ ಮೃತಪಟ್ಟಿದ್ದಾನೆ. ಭಟ್ಟ್ ಸಾವಿನ ಸುದ್ದಿ ಹಬ್ಬುತ್ತಿದ್ದಂತೆಯೇ ಜನರು ಬೃಹತ್ ಪ್ರತಿಭಟನೆಗೆ ಮುಂದಾದರು. ಅನಂತ್‌ನಾಗ್, ಶೋಪಿಯಾನ್, ಪುಲ್ವಾಮ, ಟ್ರಾಲ್, ಶ್ರೀನಗರ.. ಮುಂತಾದೆಡೆ ಭದ್ರತಾ ಪಡೆಗಳೊಂದಿಗೆ ಸಂಘರ್ಷಕ್ಕೆ ಮುಂದಾಗಿದ್ದು ಈ ವೇಳೆ ಓರ್ವ ಮೃತಪಟ್ಟಿದ್ದು 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು.ಶನಿವಾರ ಬೆಳಿಗ್ಗೆಯಷ್ಟೇ ಆರಂಭಿಸಲಾದ ಮೊಬೈಲ್ ಇಂಟರ್‌ನೆಟ್ ಸೇವೆಗೆ ಮತ್ತೆ ತಡೆ ಉಂಟಾಯಿತು. ರಾಜ್ಯದ ವಿವಿಧೆಡೆ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಲಿಲ್ಲ. ಸಬ್ಝರ್ ಭಟ್ ಸಾವು ಭಯೋತ್ಪಾದಕರಿಗೆ ಆಗಿರುವ ಭಾರೀ ಹಿನ್ನಡೆ ಎಂದು ಪರಿಗಣಿಸಲಾಗಿದೆ.

 ಬಾರಾಮುಲ್ಲ ಜಿಲ್ಲೆಯ ರಾಂಪುರ ವಿಭಾಗದಲ್ಲಿ ನಡೆದ ಎರಡನೇ ಕಾರ್ಯಾಚರಣೆಯಲ್ಲಿ ಶನಿವಾರ ಮುಂಜಾವಿನ ವೇಳೆ ಗಡಿ ನಿಯಂತ್ರಣ ರೇಖೆಯ ಬಳಿ ಕೆಲ ವ್ಯಕ್ತಿಗಳ ಸಂಶಯಾಸ್ಪದ ಓಡಾಟವನ್ನು ಪತ್ತೆ ಹಚ್ಚಿ ಉಗ್ರರ ಒಳನುಸುಳುವಿಕೆ ಕಾರ್ಯವನ್ನು ವಿಫಲಗೊಳಿಸಲಾಯಿತು. ಘಟನೆಯಲ್ಲಿ ಆರು ಉಗ್ರರು ಬಲಿಯಾಗಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News