×
Ad

ಕೊಕ್ಕಡ: ಎಂಡೋ ಸಂತ್ರಸ್ತರಿಂದ ಆಮರಣಾಂತ ಉಪವಾಸ ಧರಣಿ ಆರಂಭ

Update: 2017-05-27 12:50 IST

ಬೆಳ್ತಂಗಡಿ, ಮೇ 27: ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು, ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಆಗ್ರಹಿಸಿ ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಆಮರಣಾಂತ ಉಪವಾಸ ಧರಣಿಗೆ ಕೊಕ್ಕಡದಲ್ಲಿಂದು ಬೆಳಗ್ಗೆ ಆರಂಭಗೊಂಡಿದೆ.

ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಧರಣಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಯಾವುದೇ ರಾಜಕೀಯ ಬೇಡ. ಪ್ರತಿಯೊಬ್ಬರು ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಒದಗಿಸಿ ಕೊಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಎಂಡೋ ಸಂತ್ರಸ್ತರ ಸಮಸ್ಯೆಯ ಬಗ್ಗೆ ಮುಂದಿನ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕೋಟ ಭರವಸೆ ನೀಡಿದರು.

ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಿದ ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಅಂಗವಿಕಲರ ಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಹರೀಶ್ ಪೂಂಜಾ, ಪ್ರಮುಖರಾದ ಕುಶಲಪ್ಪ ಗೌಡ ಪೂವಾಜೆ, ಮಾತನಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿದರು.

ಎಂಡೋಸಲ್ಫಾನ್ ಪೀಡಿತರಾಗಿ ದೈಹಿಕ ಮತ್ತು ಮಾನಸಿಕ ವಿಕಲತೆಗೆ ಒಳಗಾಗಿರುವ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News