ಕೂಸಪ್ಪರ ಅಗಲಿಕೆ ಸಮಾಜಕ್ಕೆ ತುಂಬಲಾದ ನಷ್ಟ: ಇಲ್ಯಾಸ್ ತುಂಬೆ
ಪುತ್ತೂರು, ಮೇ 27: ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ, ದಲಿತ ಮುಖಂತ ಎಂ.ಕೂಸಪ್ಪ ನಿಧನದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಸಂತಾಪ ಸೂಚಕ ಸಭೆಯು ಶುಕ್ರವಾರ ಸಂಜೆ ಕುಂಬ್ರ ರೈತ ಸಭಾಭವನದಲ್ಲಿ ನಡೆಯಿತು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ದಮನಿತರ ಪರವಾಗಿರುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಕೂಸಪ್ಪನಮ್ಮನ್ನು ಅಗಲಿದ್ದರೂ ಅವರ ಸಿದ್ಧಾಂತಗಳು ಮಾತ್ರ ಎಂದೂ ಇಲ್ಲವಾಗಲು ಸಾಧ್ಯವಿಲ್ಲ. ಬದ್ಧತೆಯ ರಾಜಕಾರಣದ ಮೂಲಕ ದಮನಿತರ ಪರ ಕಾಳಜಿ ಹೊಂದಿದ್ದ ಕೂಸಪ್ಪಪ್ರತಿಯೊಂದು ಹೋರಾಟ, ನಡೆ ನುಡಿಗಳು ನಮ್ಮನ್ನು ಆಕರ್ಷಿಸುತ್ತಿದೆ, ಅವರ ನಿಲುವು ಮತ್ತು ಹೋರಾಟಗಳು, ಅವರ ಮಾನವೀಯತೆಯ ಪರವಾಗಿರುವ ಹಾದಿಯಲ್ಲಿ ಹೆಜ್ಜೆ ಹಾಕುವುದು ಕಾಲದ ಅವಶ್ಯಕತೆಯಾಗಿದೆ. ಅವರ ಅಗಲಿಕೆ ಸಮಾಜಕ್ಕೆ ತುಂಬಲಾದ ನಷ್ಟ. ಶೋಷಿತರ ಪರವಾಗಿರುವ ಧ್ವನಿಯೊಂದು ಇಲ್ಲದಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ಕೂಸಪ್ಪರ ಕನಸನ್ನು ನನಸು ಮಾಡಬೇಕು: ಆನಂದ ಮಿತ್ತಬೈಲು
ದಲಿತ ಸಂಘರ್ಷ ಸಮಿತಿಯ ಮುಖಂಡ ಆನಂದ ಮಿತ್ತಬೈಲು ಮಾತನಾಡಿ, ಕೂಸಪ್ಪಅನ್ನುವ ಶಕ್ತಿಯೊಂದನ್ನು ನಾವು ಅನಿರೀಕ್ಷಿತವಾಗಿ ಕಳೆದುಕೊಂಡಿದ್ದೇವೆ. ಅವರ ಸಂಘಟನಾತ್ಮಕ ಚಿಂತನೆ ಬದ್ಧತೆ ಎಲ್ಲರಿಗೂ ಮಾದರಿಯಾಗಿದ್ದು, ಅದನ್ನು ಸಾಕಾರಗೊಳಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹುಟ್ಟು ಹೊರಾಟಗಾರರಾಗಿರುವ ಕೂಸಪ್ಪಕಂಡ ಕನಸನ್ನು ನನಸು ಮಾಡಲು ಶ್ರಮಿಸಬೇಕಿದೆ ಎಂದರು.
ಕೂಸಪ್ಪರ ಹೋರಾಟ ನಮಗೆ ಪಾಠ: ಎಲ್.ಕೆ.ಲತೀಫ್
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅಬ್ದುಲ್ ಲತೀಫ್ ಮಾತನಾಡಿ, 47 ವರ್ಷಗಳ ಜಿವಿತಾವಧಿಯಲ್ಲಿ 30 ವರ್ಷಗಳನ್ನೂ ಹೋರಾಟಗಳ ಮೂಲಕ ವ್ಯಯಿಸಿರುವ ಕೂಸಪ್ಪರ ಹೋರಾಟದ ಜೀವನ ನಮಗೊಂದು ಪಾಠ ಎಂದರು.
ಕೂಸಪ್ಪ ನೈಜ ಹೋರಾಟಗಾರ: ಶಿವಪ್ಪ ಅಟ್ಟೋಳೆ
ದಸಂಸ ಮುಖಂಡ ಶಿವಪ್ಪ ಅಟ್ಟೋಳೆ ಮಾತನಾಡಿ, ಅಂಬೇಡ್ಕರ್ ತತ್ವ ಸಿದ್ಧಾಂತದಡಿಯಲ್ಲಿ ನೈಜ ಹೋರಾಟಗಾರರಾಗಿದ್ದ ಕೂಸಪ್ಪನಮಗೆ ಮಾರ್ಗದರ್ಶರಾಗಿದ್ದರು. ಅವರು ಸಾಗಿದ ಹಾದಿ ಮತ್ತು ಅವರ ಚಿಂತನೆಯನ್ನು ಮುಂದುವರಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಎಂದರು.
ಕೂಸಪ್ಪರ ಆದರ್ಶ ನಮ್ಮಿಂದ ದೂರವಾಗದು: ರಿಯಾಝ್ ಫರಂಗಿಪೇಟೆ
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಕೂಸಪ್ಪರ ದೇಹ ನಮ್ಮಿಂದ ದೂರವಾಗಿರಬಹುದು ಆದರೆ ಅವರ ಆದರ್ಶ ನಮ್ಮಿಂದ ಯಾವತ್ತೂ ದೂರವಾಗಲು ಸಾಧ್ಯವೇ ಇಲ್ಲ ಎಂದರು.
ಕೂಸಪ್ಪರ ಅಗಲಿಕೆ ಬಹುದೊಡ್ಡ ನಷ್ಟ: ಹನೀಫ್ ಖಾನ್
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಮಾತನಾಡಿ, ಕೂಸಪ್ಪರ ಅಗಲಿಕೆ ಸಮಾಜಕ್ಕೆ ಬಹುದೊಡ್ಡ ನಷ್ಟ ಎಂದರು.
ನಮ್ಮನ್ನಗಲಿದ ಪುತ್ತೂರಿನ ಅಂಬೇಡ್ಕರ್: ಸಿದ್ದೀಕೆ ಕೆ.ಎ.
ಎಸ್‌ಡಿಪಿಐ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಸಿದ್ದೀಕೆ ಕೆ.ಎ. ಮಾತನಾಡಿ, ಕೂಸಪ್ಪಅವರ ಬದ್ಧತೆ, ತ್ಯಾಗ ಮತ್ತು ಹೋರಾಟ ನಮಗೆಲ್ಲರಿಗೂ ಮಾದರಿಯಾಗಿದೆ. ತನ್ನ ಮನೆ, ಪತ್ನಿ, ಮಕ್ಕಳ ಬಗ್ಗೆ ಚಿಂತಿಸದೆ ದಲಿತ ಸಮುದಾಯದ ಬಗ್ಗೆ ಹಾಗೂ ಪಕ್ಷದ ಬಗ್ಗೆ ಚಿಂತನೆ ನಡೆಸಿಯೇ ತನ್ನ ಜೀವನವನ್ನು ಕಳೆದಿರುವ ಕೂಸಪ್ಪ ಪುತ್ತೂರಿನ ಓರ್ವ ಅಂಬೇಡ್ಕರ್ ಆಗಿದ್ದಾರೆ ಎಂದರು.
*ವೌನ ಪ್ರಾರ್ಥನೆ: ಕೂಸಪ್ಪರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಒಂದು ನಿಮಿಷ ವೌನ ಪ್ರಾರ್ಥನೆ ಮಾಡಲಾಯಿತು.
ವೇದಿಕೆಯಲ್ಲಿ ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯರಾದ ಶಾಫಿ ಬೆಳ್ಳಾರೆ, ಇಕ್ಬಾಲ್ ನಂದರಬೆಟ್ಟು, ದಸಂಸ ಮುಖಂಡರಾದ ಬಾಬು ಎನ್. ಸವಣೂರು, ದಸಂಸ ಮಹಿಳಾ ಮುಖಂಡರಾದ ಸುಂದರಿ, ಎಸ್‌ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಕಾರ್ಯದರ್ಶಿ ಅಶ್ರಫ್ ಮಂಚಿ, ಎಸ್‌ಡಿಟಿಯು ಮುಖಂಡ ಯೂಸುಫ್ ಆಲಡ್ಕ, ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕರ್ ರಿಝ್ವೆನ್, ಸಜಿಪ ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ, ಇಬ್ರಾಹೀಂ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಾಬಿರ್ ಅರಿಯಡ್ಕ ಮತ್ತು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಶ್ರಫ್ ಮಂಚಿ ವಂದಿಸಿದರು.