ಜಾತಿ ಸಂಘರ್ಷಕ್ಕೆ ಕೇಂದ್ರ ಸರಕಾರ ಕಾರಣ: ರಾಹುಲ್ ಗಾಂಧಿ

Update: 2017-05-27 12:19 GMT

 ಹೊಸದಿಲ್ಲಿ, ಮೇ 27: ಜಾತಿ ಸಂಘರ್ಷದಿಂದ ನಲುಗಿ ಹೋಗಿರುವ ಉ.ಪ್ರದೇಶದ ಸಹಾರನ್‌ಪುರ ಗ್ರಾಮಕ್ಕೆ ಭೇಟಿ ನೀಡುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.

ಉ.ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆ ಸಹಾರನ್‌ಪುರದಲ್ಲಿ ದಲಿತ ಮತ್ತು ಠಾಕುರ್ ಸಮುದಾಯದ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಮೂವರ ಹತ್ಯೆಯಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದರು. ಅಲ್ಲದೆ 50ಕ್ಕೂ ಹೆಚ್ಚು ದಲಿತರ ಮನೆಗೆ ಬೆಂಕಿ ಹಚ್ಚಲಾಗಿತ್ತು.

 ಸಂತ್ರಸ್ತರಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಇಲ್ಲಿಗೆ ರಾಹುಲ್ ಗಾಂಧಿ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಊರಿನ ಗಡಿಭಾಗದಲ್ಲಿ ಕಾದು ನಿಂತಿದ್ದ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಗ್ರಾಮ ಪ್ರವೇಶಿಸದಂತೆ ರಾಹುಲ್ ಗಾಂಧಿಯವರನ್ನು ತಡೆದರು. ರಾಹುಲ್ ಭೇಟಿಯಿಂದ ಕಾನೂನು ಮತ್ತು ಶಿಸ್ತು ಪರಿಪಾಲನೆಗೆ ತೊಡಕಾಗಬಹುದು ಎಂಬ ಭೀತಿಯಿಂದ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿತ್ತು.

ಈ ಸಂದರ್ಭ ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ರಾಹುಲ್, ದಲಿತರನ್ನು ದಮನಿಸುವ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದೆ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.ಸಹಾರನ್‌ಪುರಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡುವ ಉದ್ದೇಶವಿತ್ತು. ಆದರೆ ಇದರಿಂದ ಕಾನೂನು ಶಿಸ್ತು ಪರಿಪಾಲನೆಗೆ ತೊಡಕಾಗುತ್ತದೆ ಎಂದು ಹೇಳಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಸಂತ್ರಸ್ತರನ್ನು ಭೇಟಿಯಾಗಲು ಅವಕಾಶ ಸಿಗಬಹುದು ಎಂದು ಆಶಿಸುತ್ತೇನೆ ಎಂದು ರಾಹುಲ್ ಹೇಳಿದರು.

  ಕಾಶ್ಮೀರದಲ್ಲಿ ದೇಶವಿರೋಧಿ ಶಕ್ತಿಗಳು ಪ್ರಭಲವಾಗಲು ಮತ್ತು ಹಿಂಸಾಕೃತ್ಯ ಹೆಚ್ಚಾಗಲು ಕೇಂದ್ರ ಸರಕಾರದ ನೀತಿಯೇ ಕಾರಣ. ಕಾಶ್ಮೀರ ಶಾಂತಿಯುತವಾಗಿದ್ದರೆ ಭಾರತ ನೆಮ್ಮದಿಯಿಂದಿರುತ್ತದೆ. ಕಾಶ್ಮೀರ ಅಶಾಂತವಾಗಿದ್ದರೆ ಪಾಕಿಸ್ತಾನಕ್ಕೆ ಖುಷಿಯಾಗುತ್ತದೆ ಎಂದು ರಾಹುಲ್ ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಝಾದ್, ರಾಜ್‌ಬಬ್ಬರ್ ಮತ್ತಿತರರು ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News