ಯುವಕನ ಅಪಹರಿಸಿ ಬಲವಂತದ ವಿವಾಹಕ್ಕೆ ಪ್ರಯತ್ನ: ಮದುಮಗಳ ಸಹಿತ ನಾಲ್ವರ ಬಂಧನ

Update: 2017-05-27 12:59 GMT

ಪಾಟ್ನ, ಮೇ 27: ಯುವಕನೋರ್ವನನ್ನು ಅಪಹರಿಸಿ , ತಮ್ಮ ಸಂಬಂಧಿ ಯುವತಿಯೊಂದಿಗೆ ಬಲವಂತದ ವಿವಾಹ ನಡೆಸುವ ಕುಟುಂಬವೊಂದರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ ಘಟನೆ ಬಿಹಾರದ ಮುಝಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದ ಕೆಲವೆಡೆ ‘ಪಕಡ್ವ ಶಾದಿ’ ಎಂಬ ವಿಧಾನ ಬಳಕೆಯಲ್ಲಿದೆ. ಇದರಂತೆ ಪುರುಷರನ್ನು ಅಪಹರಿಸಿ ಅವರನ್ನು ಬಲವಂತ ವಿವಾಹಕ್ಕೆ ಒಪ್ಪಿಸಲಾಗುತ್ತದೆ. ಗೈಘಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೈಥಿ ಗ್ರಾಮದಿಂದ ಅಭಿನಯ್ ಕುಮಾರ್ ಎಂಬ ಯುವಕನನ್ನು ಇದೇ ಊರಿನ ನಿವಾಸಿ ನಂದಕಿಶೋರ್ ಸಿಂಗ್ ಎಂಬಾತನ ಸಂಬಂಧಿಗಳು ಅಪಹರಿಸಿರುವುದಾಗಿ ಮತ್ತು ನಂದಕಿಶೋರನ ಪುತ್ರಿ ಜೂಲಿ ಜೊತೆ ಬಲವಂತದ ವಿವಾಹಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ದೂರು ನೀಡಲಾಗಿತ್ತು.

  ಈ ಹಿನ್ನೆಲೆಯಲ್ಲಿ ಸಿಂಗ್ ಮನೆಗೆ ದಾಳಿ ನಡೆಸಿದ ಪೊಲೀಸರು ಕುಮಾರ್‌ನನ್ನು ಮದುವೆ ಮಂಟಪದಿಂದ ತಮ್ಮ ವಶಕ್ಕೆ ಪಡೆದಿದ್ದರು. ಈ ವೇಳೆ ಮದುಮಗಳು ಜೂಲಿ ಮತ್ತು ಆಕೆಯ ಕುಟುಂಬದ ಕೆಲ ಸದಸ್ಯರು ಪೊಲೀಸರ ಮೇಲೆಯೇ ಆಕ್ರಮಣಕ್ಕೆ ಮುಂದಾದರು.

 ಆಗ ಅಪಹರಣ ಮತ್ತು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಜೂಲಿ, ಆಕೆಯ ಸೋದರ, ಸೋದರಿ ಮತ್ತು ಇನ್ನೋರ್ವ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರಮಣಕ್ಕೆ ಪ್ರಯತ್ನಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

 ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಶಹೀದ್ ಖುದಿರಾಮ್ ಬೋಸ್ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದಲೇ ವಿವಾಹವನ್ನು ನಿಶ್ಚಯಿಸಲಾಗಿದೆ ಎಂದು ನಂದಕಿಶೋರ್ ಸಿಂಗ್ ತಿಳಿಸಿದ್ದಾನೆ. ಆದರೆ ತನ್ನನ್ನು ಅಪಹರಿಸಿ ಬಲವಂತದ ವಿವಾಹಕ್ಕೆ ಒಪ್ಪಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾನೆ.

 ಇವರಿಬ್ಬರ ಮದುವೆ ನಿಶ್ಚಯವಾಗಿದ್ದು ಉಂಗುರ ಬದಲಿಸುವ ಕಾರ್ಯಕ್ರಮ ಶುಕ್ರವಾರ ನಡೆಯಬೇಕಿತ್ತು. ಆದರೆ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆ ಬಂದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದು ಜೂಲಿಯ ಕುಟುಂಬಕ್ಕೆ ಆಪ್ತನಾಗಿರುವ ಪ್ರಮೋದ್ ಕುಮಾರ್ ಎಂಬಾತ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News