ವೈದ್ಯರ ಮೇಲಿನ ಹಲ್ಲೆಗೆ ವಿರೋಧ: ಜೂನ್ 6ರಂದು ದಿಲ್ಲಿಯಲ್ಲಿ ‘ಮೆಡಿಕಲ್ ಬಂದ್’
Update: 2017-05-27 19:42 IST
ಹೊಸದಿಲ್ಲಿ, ಮೇ 27: ವೈದ್ಯರ ಮೇಲೆ ನಡೆಯುವ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು ಇದನ್ನು ವಿರೋಧಿಸಿ ಜೂನ್ 6ರಂದು ದಿಲ್ಲಿಯಲ್ಲಿ ‘ಮೆಡಿಕಲ್ ಬಂದ್’ ಆಚರಿಸುವುದಾಗಿ ದಿಲ್ಲಿ ಮೆಡಿಲ್ ಅಸೋಸಿಯೇಷನ್ (ಡಿಎಂಎ) ತಿಳಿಸಿದೆ.
ಬಂದ್‌ಗೆ ಬೆಂಬಲವಾಗಿ ನಗರದಲ್ಲಿರುವ ಎಲ್ಲಾ ಆಸ್ಪತ್ರೆಗಳ ಮಾಲಕರು, ನರ್ಸಿಂಗ್ ಹೋಂ ಮತ್ತು ಚಿಕಿತ್ಸಾ ಕೇಂದ್ರಗಳು ಅಪರಾಹ್ನ 2 ಗಂಟೆಯವರೆಗೆ ವ್ಯವಹಾರ ಸ್ಥಗಿತಗೊಳಿಸಿ ಬಂದ್ ಆಚರಿಸುವಂತೆ ಡಿಎಂಎ ಕರೆ ನೀಡಿದೆ. ಅಲ್ಲದೆ ಅಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಭಾರತದಾದ್ಯಂತ ವೈದ್ಯರು ‘ಲೇಖನಿ ಮುಷ್ಕರ’ ನಡೆಸಲಿದ್ದಾರೆ. ಈ ಅವಧಿಯಲ್ಲಿ ವೈದ್ಯರು ಮದ್ದು ಬರೆದುಕೊಡುವ ಕಾರ್ಯ ನಿರ್ವಹಿಸುವುದಿಲ್ಲ ಎಂದು ಡಿಎಂಎ ಪ್ರಕಟಣೆ ತಿಳಿಸಿದೆ.