ಬೆಳ್ತಂಗಡಿ: ಎಂಡೋ ವಿರೋಧಿ ಹೋರಾಟ ಸಮಿತಿಯಿಂದ ಧರಣಿ

Update: 2017-05-27 14:18 GMT

ಬೆಳ್ತಂಗಡಿ, ಮೇ 27: ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಬಿ.ಜೆ.ಪಿ ಬೆಂಬಲದೊಂದಿಗೆ ಕೊಕ್ಕಡ ಜೋಡು ಮಾರ್ಗದಲ್ಲಿ ಶನಿವಾರ ಪ್ರತಿಭಟನಾ ಸಭೆ ನಡೆಯಿತು. ಇದರೊಂದಿಗೆ ಅಮಣಾಂತ ಉಪವಾಸ ಸತ್ಯಾಗ್ರಹವೂ ಆರಂಭಗೊಂಡಿದೆ.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಸಂಸದ ನಳೀನ್ ಕುಮಾರ್ ಕಟೀಲ್ ಎಂಡೋ ಸಂತ್ರಸ್ಥರ ಸಮಸ್ಯೆಯ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯವಹಿಸುತ್ತಿದೆ. ಸರಕಾರ ಇನ್ನಾದರು ಎಚ್ಚೆತ್ತುಕೊಂಡು ಕೂಡಲೇ ಇವರ ಸಮಸ್ಯೆಗೆ ಸ್ಪಂದಿಸುವ ಅವಶ್ಯಕತೆಯಿದೆ.  ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವರಲ್ಲಿ ಮಾತುಕತೆ ನಡೆಸಿ  ವಿವರಿಸಲಿದ್ದೇನೆ. ಲೋಕಸಭೆಯ ಮುಂದಿನ ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಿದ್ದೇನೆ. ಎಂದರು.

 ಕೊಕ್ಕಡದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಎಂಡೋ ಸಂತ್ರಸ್ಥರ ಬದುಕಿನಲ್ಲಿ ಸರಕಾರಗಳು ಮತ್ತು ಅಧಿಕಾರಿ ವರ್ಗ ಇಲ್ಲಿವರೆಗೂ ಆಟವಾಡುತ್ತಿದೆ . ಎಂಡೋ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕ್ರಮಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಉಚ್ಛ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿ ವರ್ಗ ಮಾತ್ರ ಇಲ್ಲಿವರೆಗೂ ಸಂಪೂರ್ಣ ವಾಗಿ ಪರಿಹಾರ ಕೊಡುವ ಕಡೆಗೆ ಗಮನ ನೀಡಿರುವುದಿಲ್ಲ. ನಮ್ಮ ಜಿಲ್ಲೆಯವರಾಗಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರದಲ್ಲಿದ್ದ ವೇಳೆ ಎಂಡೋ ಸಂತ್ರಸ್ಥರಿಗೆ ಕೇರಳ ಮಾದರಿ ಯಲ್ಲಿ ಅಲ್ಲ ಕರ್ನಾಟಕವೇ ಮಾದರಿ ಆಗುವಂತೆ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಈಗ ನಾವು ಇಷ್ಟು ವರ್ಷ ಕಳೆದರೂ ಏನೊಂದೂ ನಮ್ಮ ಬೇಡಿಕೆ ಈಡೇರದ ಕಾರಣ ಇಂದು ನಾವು ಅಮರಣಾಂತ ಸತ್ಯಾಗ್ರಹದ ಹಾದಿ ಹಿಡಿಯಬೇಕಾಗಿದೆ. ಸಕಾರದ ಮುಖ್ಯ ಮಂತ್ರಿಗಳು ಆರೋಗ್ಯ ಸಚಿವರು ಸಭೆಗೆ ಬಂದು ನಮ್ಮ ಮನವಿಯನ್ನು ಸ್ವೀಕರಿಸದೇ ಇದ್ದಲ್ಲಿ ಇದೇ ಸ್ಥಳದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವುದು ನಿಶ್ಚಿತ ಎಂದರು.

ಸರಕಾರದ ಗಮನವನ್ನು ಎಂಡೋ ಸಂತ್ರಸ್ಥರ ಕಡೆಗೆ ಹರಿಸಲು ಸಾಧ್ಯವಾಗದೇ ಹೋದಲ್ಲಿ ನಮ್ಮ ಜನಪ್ರತಿನಿಧಿಗಳಾದ ಶಾಸಕರು ಮುಂದಿನ ಅಧಿವೇಶನದಲ್ಲಿ ನಮಗೆ ದಯಾಮರಣವನ್ನಾದರೂ ಪಡೆದುಕೊಳ್ಳುವ ಕೃಪೆಯನು ಮಾಡಿ ಎಂದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ , ನ್ಯಾಯವಾದಿ ಹರೀಶ್ ಪೂಂಜ ಮಾತನಾಡಿ ಎಂಡೋ ಸಂತ್ರಸ್ಥರ ಬದುಕು ಇಂದು ಭೋಪಾಲ್ ವಿಷಾನಿಲ ದುರಂತದ ದುಪ್ಪಟ್ಟು ಆಗಿ ಪರಿಣಮಿಸಿದೆ. ಸರಕಾರದ ತಪ್ಪಿನಿಂದಲೇ ಅಂದು ಎಂಡೋ ಸಿಂಪಡಣೆ ಯನ್ನು ಮಾಡಲಾಗಿತ್ತು. ಅದೇ ಸಿಂಪಡಣೆಯ ದುಷ್ಪರಿಣಾಮ ಇಂದು ಸಾವಿರಾರು ಜನರು , ಮಕ್ಕಳು ತಮ್ಮ ಬದುಕನ್ನೇ ಕಳಕೊಳ್ಳುವಂತಾಗಿದೆ. ಸರಕಾರದ ಕಡೆಯಿಂದ ಆದ ತಪ್ಪಿಗೆ ಸರಕಾರವೇ ನೇರ ಹೊಣೆ ಹೊರಬೇಕು. ಎಂಡೋ ಸಂತ್ರಸ್ಥರ ಶಾಶ್ವತ ಪುನರ್ವಸತಿ ಕೇಂದ್ರ, ಪೂರ್ಣ ಪ್ರಮಾಣದ ಪರಿಹಾರವನ್ನು ಸರಕಾರ ಘೋಷಿಸುವವರೆಗೆ ಎಂಡೋ ಸಂತ್ರಸ್ಥರ ಹೋರಾಟಕ್ಕೆ ಬಿಜೆಪಿ ಪಕ್ಷವೂ ಬೆಂಬಲವನ್ನು ಘೋಷಿಸಿದೆ ಎಂದರು.

ಸುಳ್ಯ ಸಾಸಕ ಎಸ್. ಅಂಗಾರ ಮಾತನಾಡಿ ಈಗಾಗಲೇ ಕೇರಳ ಸರಕಾರದ ಮಾದರಿಯಲ್ಲಿ ನಮ್ಮ ಸರಕಾರವೂ ಎಂಡೋ ಸಂತ್ರಸ್ಥರ ಕುರಿತು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ನುಡಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ , ಎಂಡೋ ಸಂತ್ರಸ್ಥರ ಈ ಹೋರಾಟಕ್ಕೆ ತಾನು ಬಂದಿರುವುದು ಯಾಕೆಂದರೆ ಈ ವಿಷಯವನ್ನು ವಿಧಾನಪರಿಷತ್ ನಲ್ಲಿ ಚರ್ಚಿಸಲು ಬೇಕಾದ ಮಾಹಿತಿಯನ್ನು ಮತ್ತು ಇದರ ಗಂಭೀರತೆಯನ್ನು ಅರಿತುಕೊಳ್ಳಲಿಕ್ಕಾಗಿ. ಈ ಹೋರಾಟದಲ್ಲಿ ಭಾಗವಹಿಸಿರುವ ಹಾಸಗೆಯಲ್ಲಿ ಮಲಗಿಕೊಂಡಿರುವ ಸ್ಥಿತಿಯಲ್ಲಿರುವ ಸಂತ್ರಸ್ಥರನ್ನು ನೋಡುವಾಗ ಯಾರ ಮನಸ್ಸೂ ಕರಗದೇ ಉಳಿಯಲಾರದು . ವಿಧಾನಪರಿಷತ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ನುಡಿದರು.

ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ , ಬೆಳ್ತಂಗಡಿ ಮಾಜಿ ಶಾಸಕ ಪ್ರಭಾಕರ ಬಂಗೇರ , ಬಿಜೆಪಿ ಮುಖಂಡ ಕುಶಾಲಪ್ಪ ಗೌಡ ಪೂವಾಜೆ , ಗೋಳಿತೊಟ್ಟು ತಾ.ಪಂ. ಸದಸ್ಯೆ ತೇಜ್ಸವಿನಿ ಶೇಖರ್ ಕಟ್ಟಪುಣಿ, ಪುತ್ತೂರು ಎ.ಪಿ.ಎಂ.ಸಿ ಸದಸ್ಯ ರುಗಳಾದ ಬಾಲಕೃಷ್ಣ ಬಾಣಜಾಲು, ಕುಶಾಲಪ್ಪ ಗೌಡ ಅನಿಲ, ಜಿಲ್ಲಾ ಪೋಲೀಸ್ ಸಕ್ಷಮ ದೂರು ಪ್ರಾಧಿಕಾರದ ಸದಸ್ಯ ಅಬ್ರಹಾಂ ವರ್ಗೀಸ್ ನೆಲ್ಯಾಡಿ , ಬಜರಂಗ ದಳ ಜಿಲ್ಲಾ ಸಂಚಾಲಕ ಶರಣ್ ಪಂಪ್ ವೆಲ್, ಹಿಂದೂಜಾಗರಣಾ ವೇದಿಕೆ ಯ ಸುಭಾಷ್ ಪಡೀಲ್, ಪಿಎಲ್ ಡಿ ಬ್ಯಾಂಕ್ ಕೋಶಾಧಿಕಾರಿ ಭಾಸ್ಕರ್ , ತಾ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಪಾಲೇದು, ನೆಲ್ಯಾಡಿ   ಚರ್ಚಿನ ಧರ್ಮಗುರುಗಳಾದ ರೆ.ಫಾ. ಸ್ಟೀಫನ್ ಜಯರಾಜ್ , ಮಂಗಳೂರು ಭಜರಂಗ ದಳ ಸಹ ಸಂಚಾಲಕರು ಪ್ರದೀಪ್ ಪಂಪ್ ವೆಲ್ ,ಅಂಗವಿಕಲರ ಫೆಡರೇಶನ್ ಅಧ್ಯಕ್ಷ ಮಂಜುನಾಥ್, ಮಂಗಳೂರು ಆಸರೆ ಟ್ರಸ್ಟ್ ನ ಆಶಾ ಜ್ಯೋತಿ ರೈ, ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ಎಂಡೋ ಸಂತ್ರಸ್ಥ ಪ್ರದೀಪ್, ಕನ್ಯಾಡಿ ಸೇವಾ ಭಾರತಿ ನಿರ್ದೇಶಕ ವಿನಾಯಕ ರಾವ್ ಕನ್ಯಾಡಿ, ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆ,  ಸಕ್ಷಮ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಜಯರಾಮ ಬೊಳ್ಳಾಜೆ, ಅಂಗವಿಕಲರ ಫೆಡರೇಷನ್ ಮಂಗಳೂರು ಇದರ ಅಧ್ಯಕ್ಷ ದಿನೇಶ್ ಶೆಟ್ಟಿ, ದ.ಕ., ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ. ಮುರಳೀಧರ ನಾಯಕ್, ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭಾಸ್ಕರ್ ರ್ಮಸ್ಥಳ ,  ನ್ಯಾಯವಾದಿ ಧನಂಜಯ ರಾವ್ , ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ , ಮುಂಡಾಜೆ ಯಂಗ್ ಚಾಲೆಂಜರ್ಸ್‌ ನ ಅಧ್ಯಕ್ಷ ಅಶ್ರಫ್ ಅಲಿ ಕುಂಞಿ, ಮತ್ತು ಐವತ್ತಕ್ಕೂ ಮಿಕ್ಕಿ ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದರು.

2 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಮತ್ತು 500 ಕ್ಕೂ ಮಿಕ್ಕಿ ಎಂಡೋ ಸಂತ್ರಸ್ಥರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಎಸಿ , ಡಿಹೆಚ್‌ಒ ; ಎಂಡೋ ಸಂತ್ರಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ತಿಪ್ಪೇಸ್ವಾಮಿ ಪ್ರತಿಭಟನಾ ನಿರತರಲ್ಲಿಗೆ ಮಧ್ಯಾಹ್ನದ ವೇಳೆ ಮಾತುಕತೆಗಾಗಿ ಆಗಮಿಸಿದರು.

ಈ ಸಂದರ್ಭ ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮತ್ತು ಬಿಜೆಪಿ ಯುವ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅಧಿಕಾರಿಗಳಲ್ಲಿ ಯಾವುದೇ ಮಾತುಕತೆ ನಡೆಸಲು ಮುಂದಾಗಲಿಲ್ಲ. ನಮ್ಮ ಬೇಡಿಕೆ ಇರುವುದು ಎಂಡೋ ಸಂತ್ರಸ್ಥರ ಮನವಿಯನ್ನು ಸರಕಾರದ ಮುಖ್ಯ ಮಂತ್ರಿಗಳು ಯಾ ಆರೋಗ್ಯ ಸಚಿವರು ಖುದ್ದಾಗಿ ಬಂದು ಸ್ವೀಕರಿಸಬೇಕೆನ್ನುವುದಾಗಿದ್ದು ಈ ಮಾಹಿತಿಯನ್ನು ನೀವು ಸರಕಾರಕ್ಕೆ ಕೂಡಲೇ ತಲುಪಿಸಿ. ಇಲ್ಲದಿದ್ದಲ್ಲಿ ಇದೇ ಸ್ಥಳದಲ್ಲಿ ಇವತ್ತು ಆಹೋರಾತ್ರೆ ಯಿಂದ ತೊಡಗಿ ನಾಳೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ದೃಢ ನಿಶ್ಚಯ ಮಾಡಿರುವುದಾಗಿ ಸ್ಪಷ್ಟವಾಗಿ ಅಧಿಕಾರಿ ವರ್ಗದವರಿಗೆ ತಿಳಿಸಲಾಯಿತು. ಪ್ರತಿಭಟನಾ ಸ್ಥಳದಿಂದ ಈ ಅಧಿಕಾರಿಗಳು ಅಂತೆಯೇ ನಿರ್ಗಮಿಸಿದರು.

ವಿಶ್ವಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ ಸ್ವಾಗತಿಸಿದರು. ಪುರಂದರ ಗೌಡ ಕಡಿರ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News