ಪುರುಷರಲ್ಲಿ ಚೆನ್ನೈ; ಮಹಿಳೆಯರಲ್ಲಿ ಸ್ಥಳೀಯರದ್ದೆ ಪಾರಮ್ಯ!

Update: 2017-05-27 14:28 GMT

ಮಂಗಳೂರು, ಮೇ 27: ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ ಎರಡನೇ ದಿನದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಚೆನ್ನೈ ಸರ್ಫರ್‌ಗಳು ಪಾರಮ್ಯ ಮೆರೆದರೆ, ಮಹಿಳೆಯರ ವಿಭಾಗದಲ್ಲಿ ಸ್ಥಳೀಯರು ಗಮನ ಸೆಳೆದರು.

ಬಹುತೇಕ ಎಲ್ಲ ವಿಭಾಗಗಳಲ್ಲಿ ಚೆನ್ನೈ ಸರ್ಫರ್ಗಳು ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಮಹಿಳೆಯರ ಮುಕ್ತ ವರ್ಗದಲ್ಲಿ ಮಂಗಳೂರಿನ ಸ್ಥಳೀಯ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಬೀಚ್ ಉತ್ಸವದ ಅಂಗವಾಗಿ ಸಸಿಹಿತ್ಲು ಬೀಚ್‌ನಲ್ಲಿ ನಡೆಯುತ್ತಿರುವ 2ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ 2ನೇ ದಿನ ಸರ್ಧಿಗಳಿಗೆ ಸವಾಲಾಗುವ ಅಲೆಗಳು ಸಮುದ್ರದಲ್ಲಿದ್ದುದರಿಂದ ತೀವ್ರ ಪೈಪೋಟಿ ಕಂಡುಬಂತು.

ರವಿವಾರ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಗಳು ಮುಕ್ತಾಯಗೊಳ್ಳಲಿದ್ದು, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮಾನ್ಯತೆ ಪಡೆದಿರುವ ಈ ಕೂಟವನ್ನು ಸ್ಥಳೀಯ ಮಂತ್ರ ಕ್ಲಬ್ ಮತ್ತು ಕೆನರಾ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಆಯೋಜಿಸಿದೆ.

ಎರಡನೇ ದಿನದ ಕೂಟದಲ್ಲಿ ಕಿರಿಯರ ವಿಭಾಗದ (17 ರಿಂದ 21 ವರ್ಷ ವಯೋಮಿತಿ)ಯ ಮೊದಲ ಹಾಗೂ ಎರಡನೇ ಸುತ್ತು, ಮಹಿಳಾ ಮುಕ್ತ ಸ್ಪರ್ಧೆಯ ಮೊದಲ ಸುತ್ತು, ಹಿರಿಯರ ವಿಭಾಗ (22 ರಿಂದ 30 ವರ್ಷ) ಎರಡನೇ ಸುತ್ತು, ಹಾಗೂ 16ರ ವಯೋಮಿತಿಯ ಬಾಲಕರ ಸ್ಪರ್ಧೆಗಳು ನಡೆದವು. ಎಲ್ಲ ವರ್ಗಗಳ ಸೆಮಿಫೈನಲ್ ಹಾಗೂ ಫೈನಲ್, ಪುರುಷರ ಎಸ್‌ಯುಪಿ ರೇಸ್‌ನ ಎರಡನೇ ಹಂತದ ಸ್ಪರ್ಧೆಗಳು ರವಿವಾರ ನಡೆಯಲಿವೆ.

ದಿನದ ಮೊದಲ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಭಾರತದ ಭವಿಷ್ಯದ ಆಶಾಕಿರಣ ಎನಿಸಿದ ಸ್ಪರ್ಧಿಗಳು ತುರುಸಿನ ಪೈಪೋಟಿಯ ಪ್ರದರ್ಶನ ನೀಡಿದರು. 23 ಕಿರಿಯ ಸರ್ಫರ್‌ಗಳ ಪೈಕಿ ಆರು ಮಂದಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದರು. ಚೆನ್ನೈನ ಟಿ.ಮಣಿವಣ್ಣನ್, ಪಿ,ಸೂರ್ಯ, ಅಜಿತ್ ಗೌಡ, ರಾಹುಲ್ ಗೋವಿಂದ್ ಹಾಗೂ ಸತೀಶ್ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದು, ಕೇರಳದ ಏಕೈಕ ಸರ್ಫರ್ ರಮೇಶ್ ಕೂಡಾ ಈ ಹಂತಕ್ಕೆ ಮುನ್ನಡೆದಿದ್ದಾರೆ.

ಆದರೆ ಮಹಿಳೆಯರ ಮುಕ್ತ ವಿಭಾಗದಲ್ಲಿ ಸ್ಥಳೀಯ ಪ್ರತಿಭೆಗಳು ಮಿಂಚುವ ಮೂಲಕ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸರ್ಫಿಂಗ್ ಪ್ರೇಮಿಗಳಿಗೆ ಮುದ ನೀಡಿದರು. ಸೆಮಿಫೈನಲ್ಗೆ ಅರ್ಹತೆ ಪಡೆದ ಎಂಟು ಮಂದಿಯ ಪೈಕಿ ಮೂವರು ಮಂಗಳೂರಿನವರಾಗಿದ್ದು, ಸ್ಥಳೀಯರಾದ ತನ್ವಿ ಜಗದೀಶ್, ಅನೀಶಾ ನಾಯಕ್ ಹಾಗೂ ಸಿಂಚನಾ ಗೌಡ ಭರವಸೆ ಮೂಡಿಸಿದ್ದಾರೆ. ಚೆನ್ನೈನ ವಿಲಾಸಿನಿ ಸುಂದರ್ ಹಾಗೂ ಸೃಷ್ಟಿ ಸೆಲ್ವಂ, ಪುದುಚೇರಿಯ ಸುಹಾಸಿನಿ ದಮಿಯನ್, ಮಣಿಪಾಲದ ಇಶಿತಾ ಮಾಳವೀಯ ಮತ್ತು ರಷ್ಯಾದ ಓಲ್ಗಾ ಕೊಸೆಂಕೊ ನಾಳೆ ನಡೆಯುವ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದಾರೆ.

ಪುರುಷರ ಹಿರಿಯರ ವಿಭಾಗದಲ್ಲಿ (22-30 ವರ್ಷ) ತಮಿಳುನಾಡಿದ ಸ್ಪರ್ಧಿಗಳು ಏಕಸ್ವಾಮ್ಯ ಮೆರೆದರು. ಸೆಮಿಫೈನಲ್ಗೆ ಅರ್ಹತೆ ಪಡೆದ ಎಂಟು ಮಂದಿಯ ಪೈಕಿ ಆರು ಮಂದಿ ತಮಿಳುನಾಡಿನವರು. ಚೆನ್ನೈನ ಶೇಖರ್ ಪಿಚ್ಚೈ, ಧರಣಿ ಸೆಲ್ವಕುಮಾರ್, ಮಣಿಕಂಠನ್, ಅಪ್ಪು ದೇಸಪ್ಪನ್, ವಿಘ್ನೇಶ್ ವಿಜಯಕುಮಾರ್ ಮತ್ತು ಮಹಾಬಲಿಪುರದ ಸಂತೋಷ್ ಮೂರ್ತಿ ಹಾಗೂ ರಾಗುಲ್ ಪನ್ನೀರಸೆಲ್ವಂ. ಗೋವಾದ ಸ್ವಪ್ನಿನ್ ಭಿಂಹೆ ಹಾಗೂ ಕೇರಳದ ವರ್ಗೀಸ್ ಆಂಟೋನಿ ಕೂಡಾ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡರು.

16 ವರ್ಷ ವಯೋಮಿತಿ ವಿಭಾಗದಲ್ಲಿ ಕೂಡಾ ತಮಿಳುನಾಡಿನ ಸ್ಪರ್ಧಿಗಳು ಪಾರಮ್ಯ ಮೆರೆದರು. ಸೆಮಿಫೈನಲ್ ಹಂತದ ಎಲ್ಲ ಸ್ಪರ್ಧಿಗಳೂ ತಮಿಳುನಾಡಿನವರಾಗಿರುವುದು ವಿಶೇಷ. ಸಂತೋಷ್ ಶಾಂತಕುಮಾರ್, ಎಂ.ಮಣಿಕಂಠನ್, ಅಜೀಶ್ ಅಲಿ ಹಾಗೂ ಐ.ಮಣಿಕಂಠನ್. ಮಹಾಬಲಿಪುರದ ಸುನೀಲ್ ದಯಾಳನ್ ಹಾಗೂ ಶಿವರಾಜ್ಬಾಬು ಕೂಡಾ ಈ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸುಮಾರು ಆರು ಸಾವಿರಕ್ಕೂ ಹೆಚ್ಚು ಸರ್ಫಿಂಗ್ ಅಭಿಮಾನಿಗಳು ಶನಿವಾರ ಸಸಿಹಿತ್ಲು ಬೀಚ್ಗೆ ಭೇಟಿ ನೀಡಿ, ಕ್ರೀಡೆಗಳನ್ನು ಆಸ್ವಾದಿಸಿದರು. ಯೂನಿಯನ್ ಬ್ಯಾಂಕ್ ಆಫ್, ಟಿಟಿ ಗ್ರೂಪ್ ಆಫ್ ಕಂಪನೀಸ್ ಹಾಗೂ ಕಾಕ್ಸ್ ಆ್ಯಂಡ್ ಕಿಂಗ್ಸ್‌ನ ಟ್ರಿಪ್ 360, ಪ್ರಾಯೋಜಕತ್ವ ವಹಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News