ಉಜಿರೆ: ಗಣಕೀಕೃತ ವೈದ್ಯಕೀಯ ದಾಖಲೆಗಳ ವಿಭಾಗ ಉದ್ಘಾಟನೆ
ಬೆಳ್ತಂಗಡಿ, ಮೇ 27: ವೈದ್ಯಕೀಯ ದಾಖಲೆಗಳ ನಿರ್ವಹಣೆ ಮತ್ತು ಅದನ್ನು ಹುಡುಕುವ ಕೆಲಸದಲ್ಲಿ ಆಸ್ಪತ್ರೆಗಳಲ್ಲಿ ಆಗುವ ವಿಳಂಬದಿಂದ ರೋಗಿಗಳಿಗೆ ಚಿಕಿತ್ಸೆಯ ಸಮಯದಲ್ಲಿ ತೊಂದರೆಯಾಗುವುದು. ಈ ನಿಟ್ಟಿನಲ್ಲಿ ವೈದ್ಯಕೀಯ ದಾಖಲೆಗಳನ್ನು ಗಣಕೀಕೃತಗೊಳಿಸುವುದರಿಂದ ವಿಳಂಬ ಮತ್ತು ಸಿಬ್ಬಂದಿಗಳ ಅನಗತ್ಯ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಶುಕ್ರವಾರ ಗಣಕೀಕೃತ ವೈದ್ಯಕೀಯ ದಾಖಲೆಗಳ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ತ್ವರಿತ ಸೇವೆಯೆ ನಮ್ಮ ಗುರಿಯಾಗಿದ್ದು, ವೈದ್ಯಕೀಯ ದಾಖಲೆಗಳನ್ನು ಗಣಕೀಕೃತಗೊಳಿಸುವುದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಎಸ್‌ಡಿಎಂ ಮೆಡಿಕಲ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು, ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯು ದೇಶದಲ್ಲಿಯೇ ಡಿಜಿಟಲ್ ಎಂಆರ್‌ಡಿ ವಿಭಾಗ ಹೊಂದಿರುವ ಪ್ರಥಮ ಆಸ್ಪತ್ರೆಯಾಗಿದ್ದು, ಇದೀಗ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯು ಎರಡನೇಯದ್ದಾಗಿದೆ. ಡಿಜಿಟಲ್ ಎಂಆರ್‌ಡಿಯಿಂದ ಶೀಘ್ರ ರೋಗಿಗಳ ಸಮಾಲೋಚನೆ ಮತ್ತು ತಪಾಸಣೆ ನಡೆಸಲು ಅನುಕೂಲವಾಗುವುದು, ದಾಖಲೆಗಳು ಕಳೆದುಹೋಗುವ ಸಾಧ್ಯತೆಗಳು ಇರುವುದಿಲ್ಲ, ಒಬ್ಬ ರೋಗಿಯ ಸಂಪೂರ್ಣ ವೈದ್ಯಕೀಯ ವಿವರ ಒಂದೇ ಪರದೆಯಲ್ಲಿ ಕಾಣುವುದರಿಂದ ರೋಗಿಯ ಸಮಗ್ರ ಚಿಕಿತ್ಸೆಗೆ ಸಹಕಾರಿಯಾಗುವುದು. ದೀರ್ಘಕಾಲ ದಾಖಲೆಗಳ ಸಂರಕ್ಷಣೆ ಮಾಡಬಹುದು. ಮಾನವ ಶ್ರಮದ ಉಳಿತಾಯವಾಗುವುದು. ಗಣಕೀಕೃತವಾಗಿರುವುದರಿಂದ ಅನಗತ್ಯವಾಗಿ ಹಾಳಾಗುವ ಕಾಗದ, ಫೈಲುಗಳನ್ನು ಉಳಿಸಬಹುದಾಗಿದೆ ಎಂದರು.
ಡಿಜಿಟಲ್ ಎಂಆರ್‌ಡಿಯ ತಾಂತ್ರಿಕ ತಜ್ಞರಾದ ಗೋಪಾಲ್ ಅವರು ಡಿಜಿಟಲ್ ಎಂಆರ್‌ಡಿಯ ನಿರ್ವಹಣೆಯ ಬಗ್ಗೆ ವಿವರಿಸಿದರು. ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಮನ್ಮಥ್ ಕುಮಾರ್ ಸ್ವಾಗತಿಸಿ, ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ ವಂದಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪ್ರಭಾಶ್ ಕುಮಾರ್, ಮಾನ್ಯ ಹಾಗೂ ವೈದ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.